ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್ ಅವರಿಗೆ ಬುಧವಾರ(ಅ.30) ಹೈಕೋರ್ಟ್ ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ.131 ದಿನಗಳ ಜೈಲು ಶಿಕ್ಷೆ ಅನುಭವಿಸಿ, ʼದಾಸʼ ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ.ಇನ್ನೇನು ಕೆಲ ಗಂಟೆಗಳಲ್ಲೇ ಅವರು ಜೈಲಿನಿಂದ ಹೊರಬಂದು ಆಸ್ಪತ್ರೆಗೆ ದಾಖಲಾಗಿ ಬೆನ್ನುನೋವಿಗೆ ಚಿಕಿತ್ಸೆ ಪಡೆಯಲಿದ್ದಾರೆ.
ಷರತ್ತು ಬದ್ಧ ಜಾಮೀನಿನ ಮೇಲೆ ದರ್ಶನ್ ಜೈಲಿನಿಂದ ಆಚೆ ಬರಲಿದ್ದಾರೆ. ಬೆಂಗಳೂರಿನಲ್ಲಿ ಅವರು ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.ಇಬ್ಬರ ಶ್ಯೂರಿಟಿ ಮತ್ತು 2 ಲಕ್ಷ ರೂ ಬಾಂಡ್ ಪಡೆದು ಜಾಮೀನು ನೀಡಲಾಗಿದೆ. ಶ್ಯೂರಿಟಿ ಕೊಟ್ಟ ಇಬ್ಬರಲ್ಲಿ ಒಬ್ಬ ʼಬಜಾರ್ʼ ನಟ ಧನ್ವೀರ್ ಗೌಡ ಆಗಿದ್ದಾರೆ. ದರ್ಶನ್ ಸಹೋದರ ದಿನಕರ್ ಕೂಡ ಶ್ಯೂರಿಟಿ ನೀಡಿದ್ದಾರೆ.
ಧನ್ವೀರ್ ಗೌಡ ದರ್ಶನ್ ಅವರಿಗೆ ಆಪ್ತರಾಗಿದ್ದು, ಜೈಲಿನಿಂದ ಹೊರಗೆ ಇದ್ದಾಗಲೂ ದರ್ಶನ್ ಅವರೊಂದಿಗೆ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದ್ದರು. ʼಕಾಟೇರʼ ಜೈಲಿನಲ್ಲಿದ್ದಾಗಲೂ ಧನ್ವೀರ್ ಅನೇಕ ಸಲಿ ದರ್ಶನ್ ಅವರನ್ನು ಭೇಟಿ ಆಗಿ ಧೈರ್ಯ ತುಂಬುತ್ತಿದ್ದರು. ಜಾಮೀನ ಆದೇಶದ ಹಿನ್ನೆಲೆ ಬೆಂಗಳೂರಿಗೆ ಬಂದಿದ್ದ ಧನ್ವೀರ್, ಶ್ಯೂರಿಟಿ ಪ್ರಕ್ರಿಯೆ ಮುಗಿಸಿ ಬಳ್ಳಾರಿಗೆ ಹೋಗಲಿದ್ದಾರೆ ಎನ್ನಲಾಗಿದೆ.ದರ್ಶನ್ ಅವರನ್ನು ಜೈಲಿನಿಂದ ಆಚೆ ತರಲು ಧ್ಬನೀರ್ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದು, ಇದನ್ನು ಅರಿತಿರುವ ಡಿಬಾಸ್ ಅಭಿಮಾನಿಗಳು ಖುಷ್ ಆಗಿದ್ದಾರೆ. ದರ್ಶನ್ ಅವರಿಗೆ 6 ವಾರಗಳ ಕಾಲ ಜಾಮೀನು ಮಂಜೂರು ಮಾಡಲಾಗಿದೆ.