‘ದಿಲ್ಲಿ ಚಲೋ’ ಪುನರಾರಂಭಿಸುತ್ತಿದ್ದಂತೆ ಪೊಲೀಸರಿಂದ ಜಲಫಿರಂಗಿ ಪ್ರಯೋಗ

ಚಂಡೀಗಢ:

    ಕನಿಷ್ಠ ಬೆಂಬಲ ಬೆಲೆ ಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಶನಿವಾರ ‘ದಿಲ್ಲಿ ಚಲೋ’ ಪುನರಾರಂಭಿಸುತ್ತಿದ್ದಂತೆ ಹರಿಯಾಣ ಪೊಲೀಸರು ಅವರ ಮೇಲೆ ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ್ದಾರೆ.

    ಸರ್ಕಾರದ ಕಡೆಯಿಂದ ಮಾತುಕತೆಗೆ ಯಾವುದೇ ಸಂದೇಶ ಬಂದಿಲ್ಲವಾದ್ದರಿಂದ ಪ್ರತಿಭಟನಾ ನಿರತ ರೈತರು ಇಂದು ಮಧ್ಯಾಹ್ನ 12 ಗಂಟೆಗೆ ಶಂಭು ಗಡಿಯಿಂದ ದೆಹಲಿಗೆ ತಮ್ಮ ಪಾದಯಾತ್ರೆಯನ್ನು ಪುನರಾರಂಭಿಸಿದರು.ದೆಹಲಿಯತ್ತ ಸಾಗುತ್ತಿದ್ದ ಪ್ರತಿಭಟನಾಕಾರರ ಗುಂಪನ್ನು ಚದುರಿಸಲು ಹರಿಯಾಣದ ಭದ್ರತಾ ಸಿಬ್ಬಂದಿ ಅಶ್ರುವಾಯು ಮತ್ತು ಜಲಫಿರಂಗಿ ಬಳಸಿದರು. ಘಟನೆಯಲ್ಲಿ ಹಲವು ರೈತರು ಗಾಯಗೊಂಡಿದ್ದು, ಅವರನ್ನು ಪ್ರತಿಭಟನಾ ಸ್ಥಳದಲ್ಲಿ ನಿಲ್ಲಿಸಿದ್ದ ಆಂಬ್ಯುಲೆನ್ಸ್‌ಗಳ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 101 ರೈತರ ‘ಜಾಥಾ’ ಹರಿಯಾಣ ಭದ್ರತಾ ಸಿಬ್ಬಂದಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ತಲುಪಿದ ನಂತರ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದ್ದಾರೆ.

   ಇದಕ್ಕೂ ಮುನ್ನ, ಅಂಬಾಲಾ ಡೆಪ್ಯುಟಿ ಕಮಿಷನರ್ ಪಾರ್ಥ್ ಗುಪ್ತಾ ಮತ್ತು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಎಸ್ ಭೋರಿಯಾ ಅವರು ಪ್ರತಿಭಟನಾನಿರತ ರೈತರೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ರಾಷ್ಟ್ರ ರಾಜಧಾನಿ ಕಡೆಗೆ ಹೋಗದಂತೆ ರೈತರ ಮನವೊಲಿಸಲು ಪ್ರಯತ್ನಿಸಿದರು.

   ರೈತರು ದೆಹಲಿಗೆ ಹೋಗುವುದಾಗಿ ಹಠ ಹಿಡಿದರು ಮತ್ತು ತಮ್ಮ ಪಾದಯಾತ್ರೆ ಮುಂದುವರಿಸಲು ಅನುಮತಿ ನೀಡುವಂತೆ ಭದ್ರತಾ ಸಿಬ್ಬಂದಿಗೆ ಆಗ್ರಹಿಸಿದರು.

  “ನಾವು ಶಾಂತಿಯುತವಾಗಿ ಪಾದಯಾತ್ರೆ ಮುಂದುವರಿಯಲು ಬಯಸುತ್ತೇವೆ. ನಮ್ಮ ಧ್ವನಿಯನ್ನು ಈ ರೀತಿ ಹತ್ತಿಕ್ಕಬಾರದು. ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯು ಕೃಷಿಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ” ಎಂದು ರೈತ ಮುಖಂಡರೊಬ್ಬರು ಹರಿಯಾಣದ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ನಂತರ ಹೇಳಿದ್ದಾರೆ.

   “ನಾವು ಶಾಂತಿಯುತವಾಗಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದೇವೆ. ಆದ್ದರಿಂದ ನಮಗೆ ಮುಂದುವರಿಯಲು ಅವಕಾಶ ನೀಡಬೇಕು. ಸರ್ಕಾರವು ರೈತರ ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಆಲಿಸಬೇಕು ಎಂದು ನಾವು ಬಯಸುತ್ತೇವೆ. ನಾವು ಶಾಂತಿಯುತವಾಗಿ ದೆಹಲಿಗೆ ಹೋಗಲು ಬಯಸುತ್ತೇವೆ” ಎಂದು ತಿಳಿಸಿದರು.

   ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಎಸ್ ಭೋರಿಯಾ ಅವರು ಈ ವೇಳೆ ರೈತರಿಗೆ ತಿಳಿಸಿದರು.