ಬಾಗಲಕೋಟೆ:
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ ಆರೋಪಿಸಿದರು,
ಬಿಳಗಿ ತಾಲೂಕಿನ ಬಡಗುಂದಿ ಗ್ರಾಮದಲ್ಲಿ ಬುಧವಾರ ಮಾಜಿ ಸಚಿವ ಎಸ್.ಆರ್.ಪಾಟೀಲ ಅವರ ನೂತನ ವೈದ್ಯಕೀಯ ಕಾಲೇಜು ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ರಾಜ್ಯಪಾಲರ ವಿರುದ್ಧ ಕಿಡಿಕಾರಿದರು.
ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿರುವುದು ಖಂಡನೀಯ. ಸಂವಿಧಾನವನ್ನು ಎತ್ತಿ ಹಿಡಿದು ಪಕ್ಷಾತೀತವಾಗಿ ಪ್ರಜಾಸತ್ತಾತ್ಮಕವಾಗಿ ಕೆಲಸ ಮಾಡುವುದು ರಾಜ್ಯಪಾಲರ ಕರ್ತವ್ಯ. ಆದರೆ ಅನಗತ್ಯವಾದ ಕೆಲವು ಮೂರ್ಖ ವಿಚಾರದಲ್ಲಿ ಸಿಎಂಗೆ ನೋಟಿಸ್ ನೀಡಿದ್ದಾರೆ. ಭಾರತದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಬಿಜೆಪಿಯೇತರ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ರಾಜ್ಯಪಾಲರು ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಳಿಕ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಕಾಂಗ್ರೆಸ್ ಸರಕಾರ ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣಗಳ ಕುರಿತು ತನಿಖೆಗೆ ಆದೇಶಿಸಿದ್ದರೂ ಬಿಜೆಪಿಯವರು ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ. ಎರಡೂ ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ ಎಂದರು.
ತನಿಖೆಯ ನಂತರ ಸತ್ಯ ಹೊರಬರಲಿದೆ, ಆದ್ದರಿಂದ ಯಾವುದೇ ಪ್ರತಿಭಟನೆ ಅಗತ್ಯವಿಲ್ಲ, ಆದರೆ ಬಿಜೆಪಿಗೆ ಕೆಲಸವಿಲ್ಲದ ಕಾರಣ, ಈ ವಿಷಯವನ್ನು ರಾಜಕೀಯಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಕಿಡಿಕಾರಿದರು.
ಮೈತ್ರಿ ಮಾಡಿಕೊಂಡ ಪಕ್ಷಗಳಿಗೆ ದ್ರೋಹ ಬಗೆದ ಇತಿಹಾಸ ಜೆಡಿಎಸ್‌ಗೆ ಇದೆ. ಪಾದಯಾತ್ರೆ ಮಾಡುವ ನಿರ್ಧಾರದಲ್ಲಿ ಆರಂಭದಲ್ಲೇ ಒಡಕು ಮೂಡಿದೆ. ಹೀಗಾಗಿ ರಾಜಕೀಯ ದುರುದ್ದೇಶದ ಪಾದಯಾತ್ರೆ ನಡೆಯೋದು ಅನುಮಾನ. ದೋಸ್ತಿ ಪಕ್ಷಗಳಲ್ಲಿ ಏನೇನು ಆಗುತ್ತದೆ ಎಂಬುದು ನೋಡುತ್ತೀರಿ. ಈ ಹಿಂದೆಯೂ ಅವರು ದೋಸ್ತಿ ಮಾಡಿದ್ದರು. ಮುಂದೆ ಏನಾಯಿತು ಎಂಬುದನ್ನು ರಾಜ್ಯದ ಜನ ನೋಡಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರಲಿದೆ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದರು