ಬೆಂಗಳೂರು
‘ವಿನಾಯಕ ದಾಮೋದರ್ ಸಾವರ್ಕರ್ ಒಬ್ಬ ಚಿತ್ಪಾವನ ಬ್ರಾಹ್ಮಣ. ಅವರು ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಅವರು ಗೋಹತ್ಯೆಗೆ ವಿರುದ್ಧವಾಗಿರಲಿಲ್ಲ’ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿರುವುದು ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಗಾಂಧಿ ಜಯಂತಿ ಪ್ರಯುಕ್ತ ಬುಧವಾರ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಸಾವರ್ಕರ್ ಮೂಲಭೂತ ವಾದಿಯಾಗಿದ್ದರು. ಆದರೆ, ಅವರು ಮಾಡರ್ನ್ ಕೂಡ ಆಗಿದ್ದರು. ಅವರು ಗೋಮಾಂಸ ಸೇವಿಸುತ್ತಿದ್ದರು ಎಂದೂ ಕೆಲವು ಜನ ಹೇಳುತ್ತಿದ್ದಾರೆ ಎಂದಿದ್ದರು.
ಸಾವರ್ಕರ್ ಬ್ರಾಹ್ಮಣ, ಹಾಗೆಂದು ಅವರು ಖಂಡಿತವಾಗಿಯೂ ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಮೂಲಭೂತವಾದಿಯಾಗಿದ್ದರೂ ಮಾಡರ್ನ್ ಆಗಿದ್ದ ಅವರು ದನದ ಮಾಂಸ ಸೇವನೆ ಮಾಡುತ್ತಿದ್ದರು ಎಂದು ಕೆಲವರು ಹೇಳಿದ್ದಾರೆ. ಸಾವರ್ಕರ್ ಬಹಿರಂಗವಾಗಿಯೇ ಮಾಂಸಾಹಾರ ಸೇವನೆ ಬಗ್ಗೆ ಅರಿವು ಮೂಡಿಸುತ್ತಿದ್ದರು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹಾಗೆ ನೋಡಲು ಹೋದರೆ ಮಹಾತ್ಮ ಗಾಂಧಿ ಸಸ್ಯಾಹಾರಿ. ಅವರಿಗೆ ಹಿಂದೂ ಸಂಸ್ಕೃತಿ ಬಗ್ಗೆ ಅಪಾರವಾದ ಗೌರವ, ನಂಬಿಕೆ ಇತ್ತು. ಆದರೆ, ಅವರ ಅಭಿಪ್ರಾಯ ಬೇರೆ ರೀತಿಯಲ್ಲತ್ತು. ಅವರು ಡೆಮಾಕ್ರಟಿಕ್ ಆಗಿದ್ದರು ಎಂದು ಗುಂಡೂರಾವ್ ಹೇಳಿದ್ದರು.
ಮೊಹಮ್ಮದ್ ಅಲಿ ಜಿನ್ನಾ ಕೂಡ ಡೆಮಾಕ್ರಟಿಕ್ ಆಗಿದ್ದರು. ಅವರು ಕೂಡ ಕಟ್ಟಾ ಇಸ್ಲಾಂವಾದಿಯಾಗಿರಲಿಲ್ಲ. ಅವರು ವೈನ್ ಕುಡಿಯುತ್ತಿದ್ದರು, ಹಂದಿ ಮಾಂಸ ಸೇವನೆ ಮಾಡಿದ್ದರು ಎಂದು ಅನೇಕರು ಹೇಳುತ್ತಾರೆ. ಜಿನ್ನಾ ಮೂಲಭುತವಾದಿಯಾಗಿರಲಿಲ್ಲ. ಆದರೆ, ಸಾವರ್ಕರ್ ಮೂಲಭೂತವಾದಿಯಾಗಿದ್ದರು ಎಂದೂ ಗುಂಡೂರಾವ್ ಹೇಳಿದ್ದಾರೆ.
ಗುಂಡೂರಾವ್ ಹೇಳಿಕೆಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ನವರಿಗೆ ಹಿಂದುಗಳನ್ನು ಟೀಕೆ ಮಾಡುವುದೇ ಧರ್ಮ ಆಗಿದೆ. ಸಾವರ್ಕರ್ ಸತ್ತು ಸ್ವರ್ಗದಲ್ಲಿದ್ದಾರೆ, ಇನ್ನಾದರೂ ಬಿಡಿ ಅವರನ್ನು. ಕೊನೆಗೆ ಹೆಣ್ಣು ಮಕ್ಕಳು ಬಳೆಯೂ ಹಾಕಬಾರದು ಎಂಬ ಮನಸ್ಥಿತಿಗೆ ಕಾಂಗ್ರೆಸ್ ಬಂದು ಬಿಡುತ್ತದೆ. ಇನ್ನಾದರೂ ನಿಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಿ. ಟೀಕೆ ಮಾಡುವುದು ಹಿಂದುಗಳನ್ನು ಮಾತ್ರ, ಮುಸ್ಲಿಮರ ಬಗ್ಗೆ ಒಂದಾದರೂ ಮಾತಾಡಿದ್ದೀರಾ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಹಿಂದು ಧರ್ಮದಲ್ಲಿ ಮಾತ್ರ ಕೆಟ್ಟದು ಇದೆಯೇ? ಬೇರೆ ಧರ್ಮದಲ್ಲಿ ಎಲ್ಲಾ ಒಳ್ಳೆಯದೇ ಇದೆಯೇ ಎಂದು ಅಶೋಕ್ ವಾಗ್ದಾಳಿ ನಡೆಸಿದರು.