ಕಲಬೆರಕೆ ಆಹಾರ ನೀಡುವ ಹೋಟೆಲ್​ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ : ದಿನೇಶ್ ಗುಂಡೂರಾವ್

ಮಂಗಳೂರು

   ಆಹಾರ ಸುರಕ್ಷತೆ ತಪಾಸಣೆಗೆ ಆಹಾರ ಇಲಾಖೆ ರಾಜ್ಯದಾದ್ಯಂತ ಎರಡು‌ ದಿನಗಳ ವಿಶೇಷ ಆಂದೋಲನ ಹಮ್ಮಿಕೊಂಡಿರುವ ಬಗ್ಗೆ ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಆಹಾರ ಗುಣಮಟ್ಟ ಪರಿಶೀಲನೆ ಮಾಡುತ್ತಿದ್ದೇವೆ. ಇದುವರೆಗೆ ಆಹಾರ ಸುರಕ್ಷತಾ ಇಲಾಖೆ ಇದೆಯೆಂದು ಜನರಿಗೆ ಗೊತ್ತಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಅಧಿಕಾರಿಗಳಿಗೆ ಸ್ಪಷ್ಟ ಮಾರ್ಗಸೂಚಿ ನೀಡಿದ್ದೇವೆ ಎಂದರು.

   ಹೋಟೆಲ್ ರೆಸ್ಟೊರೆಂಟ್​​ಗಳಲ್ಲಿ ಆಹಾರದ ತಯಾರಿ ಪರಿಶೀಲನೆಗೆ ಹೇಳಿದ್ದೇವೆ. ಪ್ರತಿ ತಿಂಗಳು ಕೆಲ ಫುಡ್ ಐಟಂ ತಗೊಂಡು ವಿಶೇಷ ತಪಾಸಣೆ ಮಾಡುತ್ತಿದ್ದೇವೆ. ಮಾಂಸದಂಗಡಿ, ಆಹಾರ ಉದ್ದಿಮೆಗಳಲ್ಲಿ ತಪಾಸಣೆ ಮಾಡುತ್ತಿದ್ದೇವೆ. ಪ್ರತಿ ತಿಂಗಳು ವರದಿ ಬಿಡುಗಡೆಗೆ ಸೂಚಿಸಿದ್ದೇವೆ. ಜಾಗೃತಿ ಮತ್ತು ಕ್ರಮ ಎರಡೂ ಆಗುತ್ತದೆ ಎಂದು ಅವರು ಹೇಳಿದರು.

    ಆಗಸ್ಟ್​ನಲ್ಲಿ ಕೇಕ್, ಖೋವಾ ಐಟಂ ಎಲ್ಲಾ ಪರೀಕ್ಷೆ ಮಾಡಿದ್ದೇವೆ. ಅವುಗಳ ವರದಿ‌ ಇನ್ನಷ್ಟೇ ಬರಬೇಕಿದೆ. ಮುಂದಿನ ತಿಂಗಳು ಬೇರೆ ಸವ್ತುಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಲಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

   ಕಬಾಬ್, ಗೋಬಿ ಮಂಚೂರಿಗೆ ಹೆಚ್ಚಿನ ಬಣ್ಣ ಬೆರೆಸುತ್ತಿದ್ದರು. ಕೆಎಫ್​ಸಿ ಸೇರಿದಂತೆ ನಾಲ್ಕು ಆಹಾರ ಉದ್ದಿಮೆಗಳ ಲೈಸನ್ಸ್ ಸಸ್ಪೆಂಡ್ ಮಾಡಿದ್ದೇವೆ. ನಾವು ಆಗಾಗ ಕಾರ್ಯಾಚರಣೆ ಮಾಡುತ್ತಾ ಇರುತ್ತೇವೆ. ಜಾಗೃತಿ ಜೊತೆಗೆ ಕ್ರಮವನ್ನೂ ಕೈಗೊಳ್ಳಲಾಗುತ್ತಿದೆ. ಆಹಾರಕ್ಕೂ ಆರೋಗ್ಯಕ್ಕೂ ಸಂಬಂಧ ಇದೆ. ಇದನ್ನು ಜನರಿಗೆ ಹೇಳುವ ಕೆಲಸ ಮಾಡುತ್ತಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

   ಆಹಾರ ವಸ್ತುಗಳಲ್ಲಿ ರಾಸಾಯನಿಕ ಬಳಕೆ, ಕಲಬೆರಕೆ ಇತ್ಯಾದಿಗಳ ವಿರುದ್ಧ ಆಹಾರ ಇಲಾಖೆ ಕಳೆದ ಕೆಲವು ದಿನಗಳಿಂದ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ವಿಜಯನಗರದ ಫುಡ್​ ಸ್ಟ್ರೀಟ್​​ಗೆ ದಿಢೀರ್ ಭೇಟಿ ನೀಡಿದ್ದ ಅಧಿಕಾರಿಗಳು ಆಹಾರ ವಸ್ತುಗಳ ಮತ್ತು ತಿಂಡಿಗಳ ಪರಿಶೀಲನೆ ನಡೆಸಿದ್ದರು. 

   ಇಂದು ಮತ್ತು ನಾಳೆ (ಆಗಸ್ಟ್ 30 ಹಾಗೂ 31) ಕರ್ನಾಟಕದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೋಟೆಲ್ ಹಾಗೂ ರೆಸ್ಟೋರೆಂಟ್​​ಗಳಲ್ಲಿನ ಮಾಂಸ, ಮೀನು, ಮೊಟ್ಟೆಗಳ ಮಾದರಿಗಳನ್ನೂ ಸಂಗ್ರಹಿಸಿ ತಪಾಸಣೆ ನಡೆಸಲಾಗುವುದು. ಅಸುರಕ್ಷಿತ ಆಹಾರ ತಯಾರಿಸುತ್ತಿರುವವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಈ ಹಿಂದೆಯೇ ತಿಳಿಸಿದ್ದರು.

Recent Articles

spot_img

Related Stories

Share via
Copy link
Powered by Social Snap