ಗ್ರಾಪಂ ಸದಸ್ಯರಿಗೆ ಅಭ್ಯರ್ಥಿಗಳ ನೇರ ಗಾಳ

ತುಮಕೂರು:

ಸದಸ್ಯರನ್ನು, ಮುಖಂಡರನ್ನು ಬ್ಯಾಲೆನ್ಸ್ ಮಾಡುವ ಸವಾಲು | ಕುರುಡು ಕಾಂಚಾಣದ ಕಾರುಬಾರು

ವಿಧಾನಪರಿಷತ್ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿರುವಂತೆ ಚುನಾವಣಾ ಕಣ ರಂಗೇರುತ್ತಿದ್ದು, ಒಂದು ಸುತ್ತು ಬಹಿರಂಗ ಪ್ರಚಾರ, ಸಭೆಗಳನ್ನು ಮುಗಿಸಿರುವ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಇದೀಗ ನೇರವಾಗಿ ಗ್ರಾಪಂ ಸದಸ್ಯರತ್ತ ಮುಖ ಮಾಡಿರುವುದು ಕಂಡುಬಂದಿದೆ.

ಮತಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಗ್ರಾಪಂ, ನಗರಸ್ಥಳೀಯಸಂಸ್ಥೆ ಸದಸ್ಯರನ್ನು ತಾವೇ ನೇರವಾಗಿ ಭೇಟಿ ಮಾಡಲು ಮುಂದಾಗಿರುವ ಅಭ್ಯರ್ಥಿಗಳು, ಸದಸ್ಯರ ಗುಂಪಿನ ನಾಯಕರನ್ನು, ಆ ಭಾಗದ ಪಕ್ಷಗಳ ಪ್ರಮುಖರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವ ಕಾರ್ಯದಲ್ಲಿ ಮುಗ್ನರಾಗಿದ್ದಾರೆ. ಚುನಾವಣೆ ಸಮೀಪವಾಗುತ್ತಿರುವಂತೆ ಪ್ರಚಾರ ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಹೆಚ್ಚಾಗಿ ಕೇಳತೊಡಗಿದ್ದು, ಡಿಮ್ಯಾಂಡ್‍ಗಳು ಅಧಿಕವಾಗಿವೆ ಎಂದು ಚುನಾವಣಾ ಅಖಾಡದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಹಿಂದೆ ಇದೇ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಭಗವಾನ್, ಟಿ.ಎಚ್.ನಾರಾಯಣಸ್ವಾಮಿ, ಕೆ.ಎನ್.ರಾಜಣ್ಣ ಅವರ ಅವಧಿಯವರೆಗೆ ಕೋಟಿಯೊಳಗಿದ್ದ ಚುನಾವಣಾ ವೆಚ್ಚ ನಂತರದಲ್ಲಿ ಕೋಟಿ.., ಕೋಟಿ…, ದಾಟಿದೆ ಎಂಬ ಮಾತುಗಳು ಮೂರು ರಾಜಕೀಯ ಪಕ್ಷಗಳ ವಲಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಬಿಡ್ ಪ್ರಕ್ರಿಯೆಯಲ್ಲಿ ಹೆಚ್ಚಿದ ದರ ಕೋಟ್ ಮಾಡುವಂತೆ ಸದಸ್ಯರ ಮತಗಳಿಗೂ ಪೈಪೋಟಿಗೆ ಬಿದ್ದು ರೇಟಿಂಗ್ ಫಿಕ್ಸ್ ಮಾಡಲಾಗುತ್ತಿದೆ ಎಂಬ ಮಾತುಗಳು ವಾಸ್ತವತೆಗೆ ಹತ್ತಿರವೆನಿಸಿದೆ.

ಶೇ.95ರಷ್ಟು ಸದಸ್ಯರು ಗ್ರಾಮ ಪಂಚಾಯಿತಿಯವರು: ಜಿಲ್ಲೆಯಲ್ಲಿ 2465 ಪುರುಷರು, 2834 ಮಹಿಳಾ ಸದಸ್ಯರು ಸೇರಿ 5,299 ಗ್ರಾಮ ಪಂಚಾಯಿತಿ ಸದಸ್ಯರು, 260 ಸಂಖ್ಯೆಯಷ್ಟು ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರಿದ್ದಾರೆ. ಮತದಾರರಲ್ಲಿ ಶೇ.95ರಷ್ಟು ಮಂದಿ ಗ್ರಾಮ ಪಂಚಾಯಿತಿ ಸದಸ್ಯರೇ ಆಗಿರುವ ಕಾರಣ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಪ್ರಮುಖ ಗುರಿಯಾಗಿಸಿಕೊಂಡು ಅಭ್ಯರ್ಥಿಗಳು ಅವರ ಓಲೈಕೆಯಲ್ಲಿ ನಿರತರಾಗಿದ್ದಾರೆ.

ಮುಖಂಡರನ್ನು ಬಿಡುವಂತಿಲ್ಲ :

ಯಾವ ಮುಖಂಡರ ಮೂಲಕ ಹೋದರೆ ಗ್ರಾಪಂ ಸದಸ್ಯರನ್ನು ತಮ್ಮತ್ತ ಸೆಳೆಯಬಹುದು ಎಂಬ ಲೆಕ್ಕಚಾರದೊಂದಿಗೆ ಅಂತಹ ಮುಖಂಡ ಹಾಗೂ ಅವರ ಬೆಂಬಲಿತ ಸದಸ್ಯರನ್ನು ತಲುಪುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಹೀಗಾಗಿ ಚುನಾವಣಾ ಅಖಾಡದಲ್ಲಿ ಸ್ಥಳೀಯ ಮುಖಂಡರಿಗೂ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು, ಅಭ್ಯರ್ಥಿಗಳಾದವರು ಶಾಸಕರು, ಮಾಜಿ ಶಾಸಕರು, ಜಿಪಂ ತಾಪಂ ಮಾಜಿ ಸದಸ್ಯರು, ಪಂಚಾಯ್ತಿ ಮಾಜಿ ಅಧ್ಯಕ್ಷರು, ಪಕ್ಷದ ತಾಲೂಕು, ಬ್ಲಾಕ್ ಅಧ್ಯಕ್ಷರುಗಳು, ವಿವಿಧ ಘಟಕಗಳ ಮುಂಚೂಣಿ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಮುಂದುವರಿಯುವ ಅನಿವಾರ್ಯತೆ ಎದುರಾಗಿದೆ. ಚುನಾವಣಾ ಸಂಪನ್ಮೂಲ ಹಂಚಿಕೆಯಲ್ಲೂ ಈ ಮುಖಂಡರುಗಳ ಪಾತ್ರ ಗಣನೀಯವಾಗಿದ್ದು, ಚುನಾವಣಾ ಉಸ್ತುವಾರಿಗಳಾಗಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದ ಮುಖಂಡರಲ್ಲೇ ಪೈಪೋಟಿ ನಡೆದಿದ್ದು ಗುಟ್ಟಾಗಿ ಉಳಿದಿಲ್ಲ.

ವಿಧಾನಸಭೆ, ಸಂಸತ್‍ಗಿಂತಲೂ ಪರಿಷತ್ ಚುನಾವಣೆ ವೆಚ್ಚದಾಯಕವಾಗುತ್ತಿದೆ.
ಸಂವಿಧಾನದ ಅನುಚ್ಛೇದ 171ರೀತ್ಯಾ ವಿಧಾನಪರಿಷತ್ ಅನ್ನು ಅಸ್ಥಿತ್ವಕ್ಕೆ ತರಲಾಗಿದ್ದು, ಪರಿಷತ್‍ಗೆ ವಿಧಾನಸಭೆ ಸದಸ್ಯರ ಮೂಲಕ,ಸ್ಥಳೀಯ ಸಂಸ್ಥೆ ಚುನಾಯಿತ ಸದಸ್ಯರ ಮೂಲಕ, ಪದವೀಧರ, ಶಿಕ್ಷಕರ ಕ್ಷೇತ್ರದ ಪ್ರತಿನಿಧಿ ಆಯ್ಕೆ ಮೂಲಕ ಹಾಗೂ ರಾಜ್ಯಪಾಲರ ನಾಮನಿರ್ದೇಶನದ ಮೂಲಕ ಸದಸ್ಯರನ್ನಾಗಿಸುವ ಪ್ರಕ್ರಿಯೆಯನ್ನು ಸಂವಿಧಾನ ತಜ್ಞರು ರೂಪಿಸಿದ್ದರು.

ಮೇಧಾವಿಗಳು, ಚಿಂತಕರು, ಪ್ರತಿಭಾವಂತರು, ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಲು ಸಾಧ್ಯವಾಗದವರು ಮೇಲ್ಮನೆ ಪ್ರವೇಶಿಸಬೇಕೆಂಬುದು ಮೂಲ ಆಶಯ. ಆದರೆ ಇಂದು ಮೇಲ್ಮನೆ ಚುನಾವಣೆ ವಿಧಾನಸಭೆ, ಪಾರ್ಲಿಮೆಂಟ್ ಚುನಾವಣೆಗಿಂತಲೂ ಅಧಿಕ ವೆಚ್ಚದಾಯಕವಾಗುತ್ತಿದೆ. ಪರಿಷತ್ ಆಯ್ಕೆಯ ಮಾನದಂಡಗಳೇ ಬದಲಾಗಿವೆ.

2003 ರಿಂದ 2010ರ ಜನವರಿವರೆಗೆ ನಾನು ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಪ್ರತಿನಿಧಿಯಾಗಿದ್ದೆ. ಅವತ್ತಿನ ಮತದಾರರು ಹೆಚ್ಚು ಪಕ್ಷ ನಿಷ್ಟೆ, ಪ್ರಾಮಾಣಿಕತೆ, ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಅಭ್ಯರ್ಥಿ ಹಿನ್ನೆಲೆ, ಅನುಭವ, ಪ್ರಾಮಾಣಿಕತೆ, ವಿದ್ವತ್ ಪ್ರಮುಖ ಮಾನದಂಡವಾಗಿತ್ತು. ಇವತ್ತಿನ ಚುನಾವಣಾ ಪ್ರಕ್ರಿಯೆಗಳನ್ನು ನೋಡುತ್ತಿದ್ದರೆ ನಿಜಕ್ಕೂ ಗಾಬರಿಯಾಗುತ್ತಿದೆ. ನಾವು ಎತ್ತ ಸಾಗುತ್ತಿದ್ದೇವೆ? ರಾಜಕೀಯ ಪಕ್ಷಗಳು, ಮುಖಂಡರು ಮರುಚಿಂತನೆ ಮಾಡಿ ಸಂವಿಧಾನ ಆಶಯ ರೀತಿಯ ನೈಜ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಕಾನೂನು ರೂಪಿಸುವ ಅವಶ್ಯಕತೆ ಇದೆ.

ವಿ.ಎಸ್.ಉಗ್ರಪ್ಪ , ವಿಧಾನಪರಿಷತ್ ವಿರೋಧ ಪಕ್ಷದ ಮಾಜಿ ನಾಯಕರು.

 

ಎಸ್.ಹರೀಶ್ ಆಚಾರ್ಯ ತುಮಕೂರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link