ಘಟಿಕೋತ್ಸವದ ವೇಳೆ ರಾಜ್ಯಪಾಲರಿಗೆ ಅವಮಾನ ಮಾಡಿದ ಡಿಎಂಕೆ ನಾಯಕನ ಪತ್ನಿ

ಚೆನ್ನೈ: 

   ಘಟಿಕೋತ್ಸವದ  ವೇಳೆ ರಾಜ್ಯಪಾಲ ಆರ್.ಎನ್. ರವಿ ಅವರನ್ನು ಡಿಎಂಕೆ  ನಾಯಕನ ಪತ್ನಿ ಅವಹೇಳನ ಮಾಡಿರುವ ಘಟನೆ ಬುಧವಾರ ತಮಿಳುನಾಡಿನ  ತಿರುನಲ್ವೇಲಿಯ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ  32ನೇ ಘಟಿಕೋತ್ಸವ ಸಮಾರಂಭದಲ್ಲಿ ನಡೆದಿದೆ. ಪದವಿ ಪ್ರಧಾನ ಸಮಾರಂಭದಲ್ಲಿ ವಿದ್ಯಾರ್ಥಿನಿ ಜೀನ್ ಜೋಸೆಫ್ ರಾಜ್ಯಪಾಲರನ್ನು ಬಿಟ್ಟು ಉಪಕುಲಪತಿಯಿಂದ ಪದವಿ ಸ್ವೀಕರಿಸಿದ್ದಾಳೆ. ಇದು ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಭಿನ್ನಾಭಿಪ್ರಾಯವನ್ನು ಎತ್ತಿ ತೋರಿಸಿದೆ ಎನ್ನಲಾಗುತ್ತಿದೆ.

   ತಿರುನಲ್ವೇಲಿಯ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ರವಿ ಅವರಿಂದ ಪದವಿ ಪಡೆಯಲು ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಡಿಎಂಕೆಯ ನಾಗರಕೋಯಿಲ್ ಉಪ ಕಾರ್ಯದರ್ಶಿ ಎಂ. ರಾಜನ್ ಅವರ ಪತ್ನಿ ಜೀನ್ ಜೋಸೆಫ್ ರಾಜ್ಯಪಾಲರನ್ನು ಬಿಟ್ಟು ಅವರ ಪಕ್ಕದಲ್ಲಿ ನಿಂತಿದ್ದ ಉಪಕುಲಪತಿ ಚಂದ್ರಶೇಖರ್ ಅವರಿಂದ ಪದವಿ ಸ್ವೀಕರಿಸಿದಳು.

   ಈ ಘಟನೆಯು ಈಗ ಸಾಕಷ್ಟು ಸುದ್ದಿ ಮಾಡಿದೆ. ಎಂ.ರಾಜನ್ ಅವರ ಪತ್ನಿ ಜೀನ್ ಜೋಸೆಫ್ ರಾಜ್ಯಪಾಲ ರವಿ ಅವರ ತಮಿಳು ಮತ್ತು ತಮಿಳುನಾಡು ವಿರೋಧಿ ನಿಲುವನ್ನು ಪ್ರತಿಭಟಿಸಲು ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ.ಜೀನ್ ಜೋಸೆಫ್‌ಗೆ ರಾಜ್ಯಪಾಲ ರವಿ ನಗುತ್ತಾ ತನ್ನ ಪಕ್ಕದಲ್ಲಿ ನಿಲ್ಲುವಂತೆ ಸನ್ನೆ ಮಾಡುತ್ತಾರೆ. ಆದರೆ ಆಕೆ ಉಪಕುಲಪತಿಯಿಂದ ಪದವಿ ಪಡೆಯಲು ಅವರ ಮುಂದೆ ನಡೆದು ಹೋಗುತ್ತಾಳೆ. ಬಳಿಕ ಧನ್ಯವಾದಗಳು ಎಂದು ಹೇಳಿದ್ದಾಳೆ. ಅದಕ್ಕೆ ರವಿ ಅವರು ತಲೆಯಾಡಿಸಿದರು. ಇದೆಲ್ಲವೂ ಸಮಾರಂಭದ ವಿಡಿಯೊದಲ್ಲಿ ಸೆರೆಯಾಗಿದೆ.

   ಈ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೋಸೆಫ್, ʼʼರಾಜ್ಯಪಾಲರು ತಮಿಳು ಅಥವಾ ತಮಿಳುನಾಡಿಗೆ ಏನು ಮಾಡಿದ್ದಾರೆ ಎಂಬುದರ ಕುರಿತು ನನ್ನ ಹೃದಯದಲ್ಲಿ ಒಂದು ಪ್ರಶ್ನೆ ಇತ್ತು. ಅದಕ್ಕಾಗಿಯೇ ನಾನು ಹಾಗೆ ಮಾಡಿದೆʼʼ ಎಂದು ತಿಳಿಸಿದ್ದಾಳೆ..

   ನಾನು ದ್ರಾವಿಡ ಮಾದರಿಯನ್ನು ನಂಬುವುದರಿಂದ ಮತ್ತು ಉಪಕುಲಪತಿಗಳು ತಮಿಳಿಗೆ ಬಹಳಷ್ಟು ಕೆಲಸ ಮಾಡಿರುವುದರಿಂದ ನಾನು ಅವರಿಂದ ಅದನ್ನು ಸ್ವೀಕರಿಸಲು ಯೋಚಿಸಿದೆ. ಅಷ್ಟೇ ಯಾವುದೇ ವೈಯಕ್ತಿಕ ಕಾರಣಗಳಿಲ್ಲʼʼ ಎಂದು ವಿವರಿಸಿದ್ದಾಳೆ.ʼʼಪದವಿಯನ್ನು ನೀಡಲು ತಮಿಳುನಾಡಿನಲ್ಲಿ ಯೋಗ್ಯ ಜನರಿಲ್ಲವೇ? ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರು ಇದ್ದಾರೆಯಲ್ಲವೇ?ʼʼ ಎಂದು ಪ್ರಶ್ನಿಸಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಅಣ್ಣಾಮಲೈ, ʼʼಶಿಕ್ಷಣ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸುವುದು ಖಂಡನೀಯʼʼ ಎಂದು ಹೇಳಿದ್ದಾರೆ.

   ಪ್ರಸಿದ್ಧಿ ಪಡೆಯಲು ಡಿಎಂಕೆ ಸದಸ್ಯರು ಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೀಳು ದರ್ಜೆಯ ರಾಜಕೀಯವನ್ನು ತರುವುದನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಆಗ್ರಹಿಸಿದರು. 

   ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್.ಎನ್. ರವಿ ಅವರ ನಡುವೆ ಸಾಕಷ್ಟು ಬಾರಿ ತಿಕ್ಕಾಟಗಳು ನಡೆದಿವೆ. 2020 ಮತ್ತು 2023ರ ನಡುವೆ ರಾಜ್ಯ ಶಾಸಕಾಂಗವು 13 ಮಸೂದೆಗಳನ್ನು ಅಂಗೀಕರಿಸಿದ್ದು, ಅವುಗಳಲ್ಲಿ ರಾಜ್ಯಪಾಲರು 10 ಮಸೂದೆಗಳನ್ನು ತಡೆಹಿಡಿದಿದ್ದಾರೆ. ಈ ಮಸೂದೆಗಳನ್ನು ವಿಧಾನಸಭೆ ಮರು ಅನುಮೋದಿಸಿದಾಗಲೂ, ರಾಜ್ಯಪಾಲ ರವಿ ಅವರು ಒಪ್ಪಿಗೆ ನೀಡಲು ನಿರಾಕರಿಸಿದರು. ಅವುಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಿದ್ದು ಇದನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಹೇಳಿ ತೀರ್ಪು ನೀಡಿತ್ತು.

Recent Articles

spot_img

Related Stories

Share via
Copy link