ಐತಿಹಾಸಿಕ ಗೂಳೂರು ಗಣೇಶಮೂರ್ತಿ ವಿಸರ್ಜನೆ

ತುಮಕೂರು:

ಐತಿಹಾಸಿಕ ಪ್ರಸಿದ್ಧ ಗೂಳೂರು ಶ್ರೀ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಸಹಸ್ರಾಪು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು.

ಬಲಿಪಾಢ್ಯಮಿಯಂದು ಇತಿಹಾಸ ಪ್ರಸಿದ್ದ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಆರಂಭಿಸಲಾದ ಗೂಳೂರು ಗಣಪನ ಪೂಜಾ ಕೈಂಕರ್ಯಗಳು ಕಾರ್ತಿಕ ಮಾಸದಲ್ಲಿ ಸಂಪೂರ್ಣಗೊಂಡು, ಸಕಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೂಳೂರು ಕೆರೆಯಲ್ಲಿ ವರ್ಣರಂಜಿತ ಸಿಡ್ಡಿಮದ್ದಿನ ಅಬ್ಬರದ ನಡುವೆ ಗಣೇಶಮೂರ್ತಿಯನ್ನು ವಿಸರ್ಜಿಸಲಾಯಿತು.

ಎರಡು ದಿನಗಳ ಕಾಲ ನಡೆದ ಗೂಳೂರು ಗಣೇಶ ಜಾತ್ರೆಯಲ್ಲಿ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಪುನೀತರಾದರು.ಶನಿವಾರ ಸಂಜೆ 7 ಗಂಟೆಗೆ ಊರಿನ ಯಜಮಾನರ ಮನೆಯಿಂದ ನಂದಿಧ್ವಜ ಮತ್ತು ಕರಡಿ ವಾದ್ಯದೊಂದಿಗೆ ಗಣಪತಿ ದೇವಾಲಯಕ್ಕೆ ಕಳಸ ತಂದು ಮಹಾಗಣಪತಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.

ನಂತರ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಗೆ ದೇವಾಲಯದಿಂದ ಹೊರ ಬರಬೇಕಾಗಿದ್ದ ಗಣೇಶಮೂರ್ತಿಯನ್ನು ಭಾನುವಾರ ಮುಂಜಾನೆ ಹೊನ್ನೇನಹಳ್ಳಿಯ ಭೋವಿ ಸಮುದಾಯ ಸೇರಿದಂತೆ ಗ್ರಾಮದ 18 ಕೋಮಿನ ಜನರು ಒಗ್ಗೂಡಿ ದೇವಾಲಯದಿಂದ ಹೊರತಂದು ಸರ್ವಾಲಂಕೃತ ವಾಹನದಲ್ಲಿ ಕೂರಿಸಿ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿ ಕಾಮಕಟ್ಟೆ ವೃತ್ತದಲ್ಲಿ ಸಿಡ್ಡಿ ಮದ್ದಿನ ಸುರಿಮಳೆಗೈಯ್ಯಲಾಯಿತು.

ತುಮಕೂರಿನ ಶುಭಂ ಶ್ರೀನಿವಾಸನ್ ಜಿ.ವಿ. ಇಂಟರ್ ನ್ಯಾಷನಲ್ ನಾದಸ್ವರ ಮತ್ತು ತುಮಕೂರಿನ ದಿ.ಹೆಚ್.ಆರ್.ಜಯಣ್ಣ ಮತ್ತು ಸಂಗಡಿಗರಿಂದ ಕರಡಿ ಮಜಲು ಮತ್ತು ನಾಸಿಕ್ ಡೋಲು, ಕರ್ನಾಟಕ ಫೈರ್ ವರ್ಕ್ ಅವರಿಂದ ಬಾಣಬಿರುಸು, ಮದ್ದಿನಮರ, ಕರಡಿ ವಾದ್ಯ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ನೆರೆದಿದ್ದ ಭಕ್ತರ ಗಮನ ಸೆಳೆದವು.

ರಾಣೆಬೆನ್ನೂರಿನ ಶ್ರೀಹನುಮಾನ್ ನಾಸಿಕ್ ಡೋಲ್,ಹನುಮಂತ ಹಾಗೂ ಚಿಕ್ಕಮಗಳೂರಿನ ಶ್ವೇತ ತಂಡದವರಿಂದ ವೀರಗಾಸೆ, ನಂದಿ, ನವಿಲು, ಜಿರಾಫೆ, ಕವಾಡ ಡ್ಯಾನ್ಸ್, ನಕ್ಕಲು ನಲಿಸುವ ಚಾರ್ಲಿ ಡ್ಯಾನ್ಸ್ ಮತ್ತು, ನಂದಿಧ್ವಜ ಕುಣಿತ ವೀರಗಾಸೆ, ಕೀಲುಕುದುರೆ ಡೊಳ್ಳು ಕುಣಿತ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮವನ್ನು ಆಕರ್ಷಿಸಿದವು. ಗಣೇಶಮೂರ್ತಿಯ ಮೆರವಣಿಗೆಯು ಸಾಗಿದ ದಾರಿಯುದ್ದಕ್ಕೂ ಗ್ರಾಮದ ಜನತೆ ಮತ್ತು ಭಕ್ತಾದಿಗಳು ವಿಘ್ನೇಶ್ವರಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.

ವೈಭವೋಪೇತ ಮೆರವಣಿಗೆಯಲ್ಲಿ ಗೂಳೂರು ಕೆರೆ ಬಳಿ ಸಾಗಿದ ಗಣೇಶಮೂರ್ತಿಯನ್ನು ಆಕರ್ಷಕ ಸಿಡ್ಡಿಮದ್ದನ್ನು ಸಿಡಿಸಿ ಸಂಭ್ರಮಿಸಿದ ನಂತರ ಸಂಜೆ ಕೆರೆಯಲ್ಲಿ ವಿಸರ್ಜಿಸಲಾಯಿತು.ಗೂಳೂರು ಶ್ರೀಮಹಾಗಣಪತಿ ಭಕ್ತಮಂಡಳಿಯ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ವಿಸರ್ಜನಾ ಮಹೋತ್ಸವದಲ್ಲಿ ನಾಡಿನ ವಿವಿಧೆಡೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap