ಕುಣಿಗಲ್:
ಅತಿವೃಷ್ಟಿ ಪ್ರವಾಸದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಭರವಸೆ
ಅತಿವೃಷ್ಟಿಯಿಂದ ರೈತರಿಗಾಗಿರುವ ಬೆಳೆ ನಷ್ಟವು ಸೇರಿದಂತೆ ವಸತಿ ಕಳೆದು ಕೊಂಡಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಶೀಘ್ರವಾಗಿ ನೇರ ಪರಿಹಾರ ಧನವನ್ನು ಹಾಕಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ತಾಲ್ಲೂಕಿನ ಎಡಯೂರು ಹೋಬಳಿಯ ಜಲಧಿಗೆರೆ ಮತ್ತು ಬ್ಯಾಲದಕೆರೆ ಭಾಗದ ರೈತರು ಬೆಳೆದಿರುವ ರಾಗಿ ಬೆಳೆಯನ್ನು ವೀಕ್ಷಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಕಾಲಿಕ ಮಳೆಯಿಂದ ಹೆಚ್ಚಿನ ದುಷ್ಪರಿಣಾಮ ಉಂಟಾಗಿದ್ದು, ಬಹುತೇಕ ಜನರಿಗೆ ತೊಂದರೆಯಾಗಿದೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಗಳಿಗೆ ಈಗಾಗಲೇ 670 ಕೋಟಿ ರೂ ಪರಿಹಾರದ ಹಣ ಹಾಕಲಾಗಿದ್ದು, ಮನೆ ಕಳೆದುಕೊಂಡವರಿಗೆ 1 ಲಕ್ಷ ರೂ ಪರಿಹಾರವನ್ನು ಕೂಡಲೆ ವಿತರಿಸಲು ಆದೇಶಿಸಲಾಗಿದೆ. ಮನೆಗಳಿಗೆ ನೀರು ನುಗ್ಗಿ ಹಾನಿಯಾದವರಿಗೂ 10 ಸಾವಿರ ರೂ. ನೀಡುವಂತೆ ಸೂಚಿಸಲಾಗಿದೆ ಎಂದರು. ತೋಟಗಾರಿಕೆ ಬೆಳೆಗಳಿಗೆ 182 ಕೋಟಿ ರೂ ಸಹಾಯಧನ ಬಿಡುಗಡೆ ಮಾಡಲಾಗಿದ್ದು, 2 ಲಕ್ಷ 20 ಸಾವಿರ ರೈತ ಕುಟುಂಬಗಳಿ ಈ ಸೌಲಭ್ಯ ತಲುಪಿದೆ ಎಂದು ತಿಳಿಸಿದರು.
ಕೇಂದ್ರಕ್ಕೆ ಪತ್ರ :
ಎನ್‍ಡಿಆರ್‍ಎಫ್ ಅಡಿಯಲ್ಲಿ 900 ಕೋಟಿ ರೂಗಳನ್ನು ಕೇಂದ್ರ ಸರ್ಕಾರ ಕೊಡಬೇಕಾಗಿದ್ದು, ಶೀಘ್ರ ಬಿಡುಗಡೆ ಮಾಡಲಿದೆ. ಅಲ್ಲದೆ, ಈ ಹಿಂದೆ ಇದ್ದ ಎನ್‍ಡಿಆರ್‍ಎಫ್ ನಿಯಮಗಳ ಬದಲಾವಣೆಗೆ ಕೇಂದ್ರಕ್ಕೆ ಮನವಿ ಮಾಡಿದ್ದು, ಹಿಂದೆ ಇದ್ದ 6,800 ಕೋಟಿ ರೂ. ಗೆ ಬದಲಾಗಿ 20,000 ಕೋಟಿ ರೂ ಮಂಜೂರು ಮಾಡಲು ಕೋರಲಾಗಿದೆ. ಹನಿ ನೀರಾವರಿಗೆ 13,500 ಕೋಟಿ ರೂ ಗೆ ಬದಲಾಗಿ 35,000 ಕೋಟಿ ರೂ ಬಿಡುಗಡೆ ಮಾಡುವಂತೆ, ತೋಟಗಾರಿಕೆ ಇಲಾಖೆಗೆ 18 ಸಾವಿರ ಕೋಟಿಗೆ ಬದಲಾಗಿ 49 ಸಾವಿರ ಕೋಟಿ ರೂ ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಇದೇ ರೀತಿ ಇತರೆ ರಾಜ್ಯಗಳು ಸಹ ಕೇಳಿಕೊಂಡಿರುವುದರಿಂದ ಮುಂಬರುವ ದಿನಗಳಲ್ಲಿ ಕೇಂದ್ರ ಈ ಮೊತ್ತದ ಪರಿಹಾರ ಹಣ ನೀಡುವ ಭರವಸೆ ಇದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮಹಾಬಲೇಶ್ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಮುಖ್ಯ ಮಂತ್ರಿಗಳ ಆದೇಶದಂತೆ ಇಂದು 16 ಜಿಲ್ಲೆಗಳಿಗೆ ಭೇಟಿ ನೀಡಿದ್ದು, ರಾಗಿ ಮತ್ತು ಇತರೆ ಬೆಳೆಗಳ ನಷ್ಟದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕೂಡಲೆ ಪಾರದರ್ಶಕವಾಗಿ ರೈತರಿಗೆ ಆಗಿರುವ ಬೆಳೆ ನಷ್ಟ ಪರಿಹಾರವನ್ನು ವಿತರಿಸಲಾಗುವುದು.
-ಆರ್.ಅಶೋಕ್, ಕಂದಾಯ ಸಚಿವರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ