ಮುಂಬೈ:
ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವುದು, ಕಿಸ್ಸಿಂಗ್ ದೃಶ್ಯ, ಅತ್ಯಾಚಾರದ ದೃಶ್ಯಗಳನ್ನು ಮಾಡುವಾಗ ಎಲ್ಲಾ ನಟಿಯರಿಗೂ ಅದು ಕಂಫರ್ಟ್ ಎನಿಸೋದಿಲ್ಲ. ಕೆಲವು ನಟಿಯರು ಈ ವೇಳೆ ಮುಜುಗರ ಅನುಭವಿಸುತ್ತಾರೆ. ನಟಿ ದಿಯಾ ಮಿರ್ಜಾ ಅವರಿಗೂ ಹಾಗೆಯೇ ಆಗಿದೆ. ಅತ್ಯಾಚಾರ ದೃಶ್ಯದ ಬಳಿಕ ಅವರಿಗೆ ವಾಂತಿ ಆಗಿತ್ತು. ಈ ಬಗ್ಗೆ ಸಂದರ್ಶನ ಒಂದರಲ್ಲಿ ಅವರು ಹೇಳಿಕೊಂಡಿದ್ದರೆ. ವೆಬ್ ಸೀರಿಸ್ ಒಂದು ರೀ ಎಡಿಟಿಂಗ್ ಆಗಿ ಸಿನಿಮಾ ರೂಪದಲ್ಲಿ ಬರುತ್ತಿದೆ. ಈ ಚಿತ್ರದ ಶೂಟ್ ವೇಳೆ ನಡೆದ ಘಟನೆ ಇದಾಗಿತ್ತು.
2019ರಲ್ಲಿ ‘ಕಾಫಿರ್’ ಹೆಸರಿನ ವೆಬ್ ಸೀರಿಸ್ ಬಂದಿತ್ತು. ಈ ಸರಣಿಯನ್ನು ಸೋನಂ ನಾಯರ್ ಅವರು ನಿರ್ದೇಶನ ಮಾಡಿದ್ದರು. ಈ ಸರಣಿ ಈಗ ಸಾಕಷ್ಟು ಎಡಿಟಿಂಗ್ ಬಳಿಕ ಸಿನಿಮಾ ರೂಪದಲ್ಲಿ ಹೊರ ಬರುತ್ತಿದೆ. ಪಾಕಿಸ್ತಾನದ ಮಹಿಳೆ ಕೈನಾಜ್ ಅಖ್ತರ್ (ದಿಯಾ ಮಿರ್ಜಾ) ಭಾರತದಲ್ಲಿ ಬಂದು ಸಿಲುಕುತ್ತಾಳೆ. ಆಕೆಯ ಮೇಲೆ ಭಯೋತ್ಪಾದನೆಯ ಆರೋಪ ಬರುತ್ತದೆ. ನಿಜಕ್ಕೂ ಆಕೆ ಭಯೋತ್ಪಾದಕಿಯಾ? ಅವಳ ಮೇಲೆ ಈ ಆರೋಪ ಬಂದಿದ್ದು ಹೇಗೆ ಎಂಬುದನ್ನು ಸಿನಿಮಾ ವಿವರಿಸುತ್ತದೆ. ಆಕೆಯ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಬಗ್ಗೆಯೂ ಸಿನಿಮಾದಲ್ಲಿ ಹೇಳಲಾಗಿದೆ.
‘ಅತ್ಯಾಚಾರದ ದೃಶ್ಯ ಮಾಡುವಾಗ ಸಾಕಷ್ಟು ಕಷ್ಟ ಆಯಿತು. ಆ ದೃಶ್ಯ ಶೂಟ್ ಮಾಡಿದ ಬಳಿಕ ನಾನು ನಡುಗುತ್ತಿದ್ದೆ. ಈ ದೃಶ್ಯದ ಶೂಟ್ ಬಳಿಕ ನನಗೆ ವಾಂತಿ ಆಯಿತು. ಈ ಸಂದರ್ಭದಲ್ಲಿ ನಾವು ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ಗಟ್ಟಿ ಇರಬೇಕು. ನೀವು ನಿಮ್ಮ ಇಡೀ ದೇಹವನ್ನು ಆ ಕ್ಷಣದ ಸತ್ಯಕ್ಕೆ ತೆಗೆದುಕೊಂಡು ಹೋದಾಗ ನೀವು ಅದನ್ನು ಅನುಭವಿಸುತ್ತೀರಿ’ ಎಂದಿದ್ದಾರೆ ದಿಯಾ ಮಿರ್ಜಾ. ಅತ್ಯಾಚಾರದ ದೃಶ್ಯವನ್ನು ಮಾಡುವಾಗ ದಿಯಾ ಮಿರ್ಜಾಗೆ ಕಷ್ಟ ಆಗಲು ಕಾರಣ ಆಗಿದ್ದು ಅವರು ನಟನೆಯಲ್ಲಿ ಮುಳುಗಿ ಹೋಗಿದ್ದು. ತಮ್ಮೆ ಮೇಲೆ ಅತ್ಯಾಚಾರ ಆಗುತ್ತಿದೆ ಎಂಬ ರೀತಿಯ ಭಾವನೆ ಅವರಿಗೆ ಕಾಡಿತು. ಇದರಿಂದ ಅವರ ಮನಸ್ಸಿಗೆ ಘಾಸಿ ಆಯಿತು. ಆದರೆ, ನಟನೆಗೆ ಸಂಪೂರ್ಣ ನ್ಯಾಯ ಒದಗಿಸಿದ ಭಾವನೆ ಅವರಲ್ಲಿ ಇದೆ.
‘ಕಾಫಿರ್’ ಸರಣಿ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಈಗ ಸಿನಿಮಾ ಕೂಡ ಅಲ್ಲಿಯೇ ರಿಲೀಸ್ ಆಗಲಿದೆ. ಇದು ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಮಾಡಿದ ಸಿನಿಮಾ ಆಗಿದೆ.
