ಕೆಜಿ ಹಳ್ಳಿ- ಡಿಜೆ ಹಳ್ಳಿ ಕೇಸ್‌ ಆರೋಪಿ ಕೋರ್ಟ್‌ಗೆ ಹಾಜರು

ಶಿರಸಿ:

    2020ರ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ ಸೇರಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಪ್ರಮುಖ ಆರೋಪಿ, ಶಿರಸಿಯ ಟಿಪ್ಪು ನಗರ ನಿವಾಸಿ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್‌ನನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಶಿರಸಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾಹಿತಿ ನೀಡಿದ್ದಾರೆ.

   ಶಿರಸಿಯ ಟಿಪ್ಪು ನಗರದ ನಿವಾಸಿಯಾಗಿದ್ದ ಮೌಸಿನ್‌ನನ್ನು ವಿಜಯಪುರ ಜಿಲ್ಲೆಯ ಸಿಂದಗಿಯ ಮಾರಟಗಿಯ ಬಳಿ ಬಂಧಿಸಲಾಗಿದೆ. ಆರೋಪಿಯು ನಿಷೇಧಿತ ಪಿ.ಎಫ್.ಐ. ಸಂಘಟನೆಯ ಸದಸ್ಯ ಮತ್ತು ಈ ಹಿಂದೆ ಕೆಲ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ. ಹೀಗಾಗಿ ಆರೋಪಿಯನ್ನು ಶಿರಸಿ ಪೊಲೀಸರು ಕಾರ್ಯಾಚರಣೆ ನಡೆಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

   ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ 5ನೇ ಆರೋಪಿ ಮೌಸಿನ್, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠಾಸೀನ ಶಿರಸಿ ಕೋರ್ಟ್‌ಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಈ ಆರೋಪಿಯ ಪತ್ತೆಗಾಗಿ ಹೊಸ ಮಾರುಕಟ್ಟೆ ಪೊಲೀಸ್‌ ಠಾಣೆಯ ಪಿ.ಎಸ್.ಐ ರಾಜಕುಮಾರ ಉಕ್ಕಲಿ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡವು ಆರೋಪಿಯನ್ನು ಬಂಧಿಸಿ, ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

   ಆರೋಪಿ ಮೌಸಿನ್ ನಿಷೇಧಿತ ಪಿ.ಎಫ್.ಐ ಸಂಘಟನೆಯ ಸದಸ್ಯನಾಗಿದ್ದು, ಆತನ ಮನೆಯ ಮೇಲೆ ಎನ್‌ಐಎ. ದಾಳಿ ಮಾಡಿತ್ತು. ಇದರಿಂದ ತಲೆ ಮರೆಸಿಕೊಂಡು ಓಡಾಡುತ್ತಾ ಮಹಾರಾಷ್ಟ್ರದ ಅಮೀನಗಡ, ಬಾಂಬೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ವಾಸವಾಗಿದ್ದ. ಬಳಿಕ ತನ್ನ ಕಟುಂಬದವರೊಂದಿಗೆ ಹೈದರಾಬಾದ್‌ಗೆ ಹೋಗಿ ಅಲ್ಲಿಂದ ವಾಪಸ್ ಬರುತ್ತಿರಬೇಕಾದರೆ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು. 

    ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್ ಪಿಎಫ್‌ಐ ಕಾರ್ಯಕರ್ತನಾಗಿದ್ದಲ್ಲದೇ ಉಗ್ರರಿಂದ ತರಬೇತಿ ಪಡೆದಿದ್ದ. ಈತನ ಪತ್ತೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.‌ನಾರಾಯಣ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಇನ್ನು ಈ ಹಿಂದೆ ಉಗ್ರ ಚಟುವಟಿಕೆ ಸಂಬಂಧಿಸಿ ಶಿರಸಿಯಲ್ಲಿ ಎನ್​ಐಎಯಿಂದ ಬಂಧಿತನಾಗಿದ್ದ ಸಾದಿಕ್​, ಈ ಆರೋಪಿ ಮೌಸೀನ್​ಗೆ ತರಬೇತಿ ನೀಡಿದ್ದ.​ ಶಿರಸಿಯಲ್ಲಿ 302 ಪ್ರಕರಣಗಳ ಆರೋಪಿಯಾದ ಈತ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.