ಬೆಂಗಳೂರು:
ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅವರು ಮತ್ತೊಮ್ಮೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಇಬ್ಬರು ನಾಯಕರ ಭೇಟಿ ಕುತೂಹಲ ಮೂಡಿಸಿದೆ.
ಈ ಹಿಂದೆ ಮೂರು ಶಿಕ್ಷಕರು ಮತ್ತು ಮೂರು ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿನ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಶಿವರಾಂ ಹೆಬ್ಬಾರ್ ಅವರು ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು.
ಇದೀಗ ವಿಧಾನಸಭೆ ಸಂಖ್ಯಾಬಲದ ಆಧಾರದಲ್ಲಿ ನಡೆಯಲಿರುವ ವಿಧಾನ ಪರಿಷತ್ತಿನ 11 ಸ್ಥಾನಗಳ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಮತ್ತೆ ಭೇಟಿ ನೀಡಿರುವುದು ಕುತೂಹಲ ಮೂಡುವಂತೆ ಮಾಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಸದಾಶಿವ ನಗರದಲ್ಲಿರುವ ಡಿಸಿಎಂ ಮನೆಗೆ ಆಗಮಿಸಿದ್ದ ಶಿವರಾಮ್ ಹೆಬ್ಬಾರ್‌ಅವರು, ಪರಿಷತ್ತಿನ ಚುನಾವಣೆ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಶಾಸಕರು, ಕ್ಷೇತ್ರದ ಕೆಲಸಕ್ಕೆ ಎಂದು ಪದೇಪದೆ ಬರುತ್ತೇನೆ. ಒಬ್ಬ ಶಾಸಕನಾಗಿ ಉಪಮುಖ್ಯಮಂತ್ರಿಯನ್ನು ಭೇಟಿಯಾಗುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯಿಂದ ನೋಟಿಸ್ ಕೊಟ್ಟಿದ್ದಾರೆ. ಪಕ್ಷ ಕ್ರಮ ಕೈಗೊಂಡರೇ ನಿಮ್ಮ ನಿಲುವು ಏನು ಎಂಬ ಪ್ರಶ್ನೆಗೆ ಉತ್ತರಿಸಿ, ಕ್ರಮ ತೆಗೆದುಕೊಂಡಾಗ ಹೇಳುತ್ತೇನೆ ಎಂದಷ್ಟೇ ಹೇಳಿದರು.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ಶಿವರಾಂ ಹೆಬ್ಬಾರ್ ನನ್ನ ಒಳ್ಳೆಯ ಗೆಳೆಯ. ಅವರು ಆಗಾಗ್ಗೆ ಭೇಟಿಯಾಗುತ್ತಲೇ ಇರುತ್ತಾರೆ ಎಂದು ಹೇಳಿದರು.