ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತಿತರ ಕಾಂಗ್ರೆಸ್ ಮುಖಂಡರು ದಾವಣಗೆರೆಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದಿಂದಾಗಿ ನೆಲಮಂಗಲದ ಟಿ. ಬೇಗೂರು ಬಳಿ ಶುಕ್ರವಾರ ಸಂಜೆ ಸುರಕ್ಷಿತವಾಗಿ ತುರ್ತು ಭೂಸ್ಪರ್ಶವಾಗಿದೆ.
ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್ ಹಾಗೂ ಎಂಎಲ್ಸಿ ಯು.ಬಿ. ವೆಂಕಟೇಶ್ ಅವರು ಮಧ್ಯಾಹ್ನ ದಾವಣಗೆರೆಯಲ್ಲಿ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ಆಯೋಜಿಸಿದ್ದ ಕೋವಿಡ್ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದರು.
ಆದರೆ ವಿಪರೀತ ಮಳೆಯ ಕಾರಣ ಪ್ರತಿಕೂಲ ಹವಾಮಾನದಿಂದಾಗಿ ಅವರಿದ್ದ ಹೆಲಿಕಾಪ್ಟರ್ ಇಳಿಯಲು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಅನುಮತಿ ಲಭ್ಯವಾಗಲಿಲ್ಲ.
ಹೀಗಾಗಿ ಶಿವಕುಮಾರ್ ಹಾಗೂ ಸಹೋದ್ಯೋಗಿಗಳಿದ್ದ ಹೆಲಿಕಾಪ್ಟರ್ ನೆಲಮಂಗಲದ ಟಿ. ಬೇಗೂರು ಬಳಿ 4 ಗಂಟೆ ಸುಮಾರಿಗೆ ಸುರಕ್ಷಿತವಾಗಿ ಧರೆಗಿಳಿಯಿತು. ಅಲ್ಲಿಂದ ರಸ್ತೆ ಮಾರ್ಗವಾಗಿ ಶಿವಕುಮಾರ್ ಮತ್ತು ಇತರ ಕಾಂಗ್ರೆಸ್ ಮುಖಂಡರು ರಾಜಭವನದತ್ತ ಹೊರಟಿದ್ದಾರೆ.
ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ನಿಯೋಗವು ರಾಜ್ಯಪಾಲರನ್ನು ನಿಗದಿತ ಸಮಯಕ್ಕಿಂತ (ಸಂಜೆ 4) ಒಂದು ಗಂಟೆ ತಡವಾಗಿ ಭೇಟಿ ಮಾಡಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ