‘ಜನರ ಜೀವ ಹಿಂಡುತ್ತಿರುವ ಸರ್ಕಾರ’ – ಡಿಕೆಶಿ ಆರೋಪ

ತಿಪಟೂರು :

      2014ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರದಿಂದ ಯಾರಿಗೂ ಉಪಯೋಗವಾಗಿಲ್ಲ ಕೊರೊನಾ ಸಂಕಷ್ಟದಲ್ಲಿ ದೇಶದ ಜನರು ದಿಕ್ಕೆಟ್ಟಿರುವಾಗ ಇಂಧನ, ದಿನಸಿ, ಖಾದ್ಯ ತೈಲ ಬೆಲೆ ಏರಿಸಿ ಜೊತೆಗೆ, ವರ್ತಕರಿಗೆ ಅಧಿಕ ತೆರಿಗೆ ವಿಧಿಸಿ ಜೀವ ಹಿಂಡುತ್ತಿದ್ದು, ಇದು ದರಿದ್ರ ಸರ್ಕಾರವೆಂದು ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

      ಇಂಧನ, ದಿನಸಿ, ಖಾದ್ಯ ತೈಲದ ಬೆಲೆ ಏರಿಕೆ ವಿರುದ್ಧ ತಾಲ್ಲೂಕಿನ ಕಿಬ್ಬನಹಳ್ಳಿ ಕ್ರಾಸ್‍ನಲ್ಲಿ “100 ನಾಟ್‍ಔಟ್” ಎಂಬ ವಿನೂತನ ಪ್ರತಿಭಟನೆಯಲ್ಲಿ ಭಾಗವಹಿಸಿ ನಂತರ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಕೇಂದ್ರ ಬಿಜೆಪಿ ಸರ್ಕಾರ ಯಾರಿಗೆ ತಾನೆ ಒಳ್ಳೆಯದು ಮಾಡಿದೆ. ಅದಾನಿ, ಅಂಬಾನಿಗಳು ಮೋದಿ ಮತ್ತು ಅಮಿತ್‍ಷಾರ ಸಹೋದರರಂತೆ ವರ್ತಿಸುತ್ತಿದ್ದಾರೆ. ದೇಶದ ಆರ್ಥಿಕತೆ ದಿವಾಳಿಯಾಗಿರುವಾಗ ಅದಾನಿ ಮತ್ತು ಅಂಬಾನಿಗೆ ಮಾತ್ರ ಹೇಗೆ ಆದಾಯ ಬರುತ್ತಿದೆ. ಇನ್ನು ದೇಶದ ಜನಸಾಮಾನ್ಯರ ಆದಾಯಕ್ಕೆ ಕುತ್ತು ತಂದಿರುವ ಬಿಜೆಪಿ ಸರ್ಕಾರ, ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಅವರ ಜೀವನಕ್ಕೆ ದೊಡ್ಡ ಹೊಡೆತ ನೀಡಿದೆ. ವಿಶ್ವಗುರುವಾಗಬೇಕೆಂಬ ನಿಟ್ಟಿನಿಂದ ಊರ ದನ ಕಾಯ್ದು ಬೋರೆಗೌಡ ಎನ್ನಿಸಿಕೊಳ್ಳಬೇಕೆಂಬ ಆಸೆಯಿಂದ ಇದ್ದ ಬದ್ದ ಲಸಿಕೆಗಳನ್ನು ವಿದೇಶಗಳಿಗೆ ನೀಡಿದರು. ಈಗ ಜನರನ್ನು ಲಸಿಕೆಗಾಗಿ ಸಾಲು ನಿಲ್ಲುವಂತೆ ಮಾಡಿದ್ದಾರೆ.

      ಸರದಿ ಸಾಲಿನಲ್ಲಿ ನಿಲ್ಲಿಸಿದ್ದೆ ದೊಡ್ಡಸಾಧನೆ: ದೇಶದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಜನರನ್ನು ನೋಟು ಅಮಾನ್ಯೀಕರಣ ಮಾಡಿ ನೋಟು ಬದಲಾವಣೆಗೆ, ಜನಧನ್ ಖಾತೆ ತೆರೆಯಲು, ಕೊರೊನಾ ಪರೀಕ್ಷೆಮಾಡಿಸಲು, ಬೆಡ್‍ಗಾಗಿ, ಆಕ್ಸಿಜನ್‍ಗಾಗಿ, ಐಸಿಯುಗಾಗಿ, ಲಸಿಕೆಗಾಗಿ ಕೊನೆಗೆ ಸತ್ತವರ ಹೆಣ ಅಂತ್ಯ ಸಂಸ್ಕಾರ ಮಾಡಲು ಸ್ಮಶಾನದಲ್ಲು ಸರದಿ, ಈಗ ಜನರು ತಮ್ಮ ಜೀವನ ಸಾಗಿಸಲು ತಮ್ಮ ಬಳಿ ಇರುವ ಬಂಗಾರದ ತಾಳಿ ಮತ್ತಿತರ ವಸ್ತುಗಳನ್ನು ಅಡವಿಡಲು ಸರದಿ ನಿಲ್ಲಿಸಿದ್ದು ಮೋದಿ ಸರ್ಕಾರದ ಸಾಧನೆ ಎಂದರು.

      ಇನ್ನು ಲಸಿಕೆ ವಿರುದ್ದ ನಾವು ಅಪಪ್ರಚಾರ ಮಾಡಿಲ್ಲ, ಲಸಿಕೆ ಹಾಕಿಸಿಕೊಂಡವರಿಗೆ ಸಿಗುವ ಪ್ರಮಾಣಪತ್ರದಲ್ಲಿ ಮೋದಿ ಭಾವಚಿತ್ರ ಏಕೆ? ರಾಷ್ಟ್ರಧ್ವಜ ಇಲ್ಲ, ರಾಷ್ಟ್ರಲಾಂಛನ ಹಾಕಿ ಎಂದಿದ್ದನ್ನೆ ಅಪಪ್ರಚಾರವೆಂದರೆ ಹೇಗೆ? ಹಾಗಾದರೆ ಕೊರೊನಾದಿಂದ ಮೃತಪಟ್ಟವರ ಮರಣ ಪ್ರಮಾಣ ಪತ್ರದಲ್ಲೂ ಮೋದಿ ಚಿತ್ರ ಹಾಕಿಸಿಕೊಡಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಅಣಕಿಸಿದರು. ಜೊತೆಗೆ ತೈಲ ಬೆಲೆ ಏರಿಕೆ ವಿರುದ್ಧ ಬಿಜೆಪಿಯ ಯಡಿಯೂರಪ್ಪ, ಈಶ್ವರಪ್ಪ ಮತ್ತು ಶೋಭಾ ಕರಂದಾಜ್ಲೆ ಅವರು ಹಾಕಿಕೊಟ್ಟ ಹಾದಿಯಲ್ಲೆ ನಾವು ಸಹ ಪ್ರತಿಭಟಿಸುತ್ತಿದ್ದೇವೆಂದು ತಿಳಿಸಿದರು.

      ಇನ್ನು ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಜನಸಾಮಾನ್ಯರ ವೇತನ ಹೆಚ್ಚಾಗಿದೆಯಾ? ನರೇಗಾ ಕಾರ್ಮಿಕರ ದಿನಗೂಲಿ ಹೆಚ್ಚಾಗಿದೆಯಾ? ಇಲ್ಲ. ಆದರೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಇತರೆ ಪದಾರ್ಥಗಳ ಬೆಲೆಯನ್ನೂ ಹೆಚ್ಚಿಸಿದೆ. ಕಬ್ಬಿಣ, ಸಿಮೆಂಟ್ ಬೆಲೆ ಎಷ್ಟಾಗಿದೆ? ಜನಸಾಮಾನ್ಯರು ಮನೆ ಕಟ್ಟುವ ಆಸೆ ದೂರವಾಗಿದೆ. ಅಗತ್ಯ ದಿನಬಳಕೆ ವಸ್ತು ಬೆಲೆ ಏನಾಗಿದೆ? ಉದ್ಯೋಗ ಕೇಳಿದ ಯುವಕರಿಗೆ ಪಕೋಡ ಮಾರಿ ಎಂದರು. ಈಗ ಅಡುಗೆ ಎಣ್ಣೆ ಬೆಲೆಯನ್ನು ಹೆಚ್ಚಿಸಿದ್ದಾರೆ. ರಸಗೊಬ್ಬರ, ವಿದ್ಯುತ್ ದರ ಬೆಲೆಯೂ ಗಗನಕ್ಕೆರಿವೆ. ಆ ಮೂಲಕ ಬಿಜೆಪಿ ಸರ್ಕಾರ ಜನರ ಜೇಬಿನಿಂದ ಪಿಕ್ ಪಾಕೆಟ್ ಮಾಡುತ್ತಿದೆ ಎಂದರು.

   ಸಮಾಜಿಕ ಜಾಲತಾಣದ ನಿರ್ಬಂದ :

      ಈ ಸರ್ಕಾರ ಅಧಿಕಾರಕ್ಕೆ ಬರಲು, ಯುವಕರಿಂದ ಮತ ಪಡೆಯಲು, ಕಾಂಗ್ರೆಸ್ ನಾಯಕರ ಟೀಕೆ ಮಾಡಲು ಟ್ವಿಟರ್, ಫೇಸ್‍ಬುಕ್ ಸೇರಿ ಸಾಮಾಜಿಕ ಜಾಲತಾಣ ಬೇಕಾಗಿತ್ತು. ಆದರೆ ಈಗ ಜನ ಸರ್ಕಾರವನ್ನು ಪ್ರಶ್ನಿಸಿ ಟೀಕಿಸುತ್ತಿರುವಾಗ ಅದಕ್ಕೆ ಬ್ರೇಕ್ ಹಾಕಲು ಕಾನೂನು ತರುತ್ತಿದ್ದಾರೆ ಎಂದರು.

      ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಮಾತನಾಡಿ ನಾವು ಅಧಿಕಾರಕ್ಕೆ ಬಂದರೆ 2 ಕೋಟಿ ಉದ್ಯೋಗ ನೀಡುತ್ತೇವೆಂದು ಹೇಳಿದ ಮೋದಿ ಈಗ ಇರುವ ಕೆಲಸಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಜೊತೆಗೆ ಉದ್ಯೋಗ ನೀಡಿ ಎಂದಾಗ ಪಕೋಡ ಮಾರಿ ಎಂದು ಈಗ ಒಮ್ಮೆಲೆ ಪಕೋಡ ಮಾಡಲು ಬೇಕಾದ ಅಡುಗೆ ಎಣ್ಣೆಯ ಬೆಲೆ ಯನ್ನು ದ್ವಿಶತಕದ ಹತ್ತಿರ ತಂದಿದ್ದಾರೆ. ಸರ್ಕಾರ ನಡೆಸುವವರು ನಮ್ಮ ಮೈಸೂರು ಮಹಾರಾಜರನ್ನು ನೋಡಿ ಕಲಿಯಬೇಕು, ಅಂದು ಕನ್ನಂಬಾಡಿಯನ್ನು ಕಟ್ಟಬೇಕಾದರೆ ಹಣ ಸಾಲದೇ ಇದ್ದಾಗ ಮಂತ್ರಿಗಳು ಜನರ ತೆರಿಗೆಯನ್ನು ಹೆಚ್ಚಿಸೋಣ ಎಂದಾಗ ಜನರಿಗೆ ಕಷ್ಟಕೊಡುವುದು ಬೇಡ, ಅರಮನೆಯ ಚಿನ್ನಾಭರಣಗಳನ್ನು ಅಡವಿಟ್ಟು ಅಣೆಕಟ್ಟು ಕಟ್ಟಿ ಎಂದಿದ್ದರು. ಈಗ ಮೋದಿ ಇಂತಹ ಸಂಕಷ್ಟದ ಸಮಯದಲ್ಲಿ ತೈಲ, ದಿನಬಳಕೆ ವಸ್ತುಗಳ ಬೆಲೆ ಏರಿಸಿ ಜನರ ಜೀವನ ದೊಂದಿಗೆ ಆಟವಾಡುತ್ತಿದ್ದಾರೆ ಎಂದರು.

      ಪ್ರತಿಭಟನೆಯಲ್ಲಿ ಶಾಸಕ ಡಾ.ರಂಗನಾಥ್, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಷಡಕ್ಷರಿ, ರಫೀಕ್‍ಅಹಮದ್, ಆರ್.ನಾರಾಯಣ, ಪಕ್ಷದ ಜಿಲ್ಲಾಧ್ಯಕ್ಷ ರಾಮಕೃಷ್ಣ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿ ಹುಲಿಕುಂಟೆ ಮಠ್, ಗೀತಾ ರಾಜಣ್ಣ, ವನಗಿರಿಗೌಡ, ತಾಲ್ಲೂಕು ಅಧ್ಯಕ್ಷ ಕಾಂತರಾಜು, ತಾಲ್ಲೂಕು ಕಾಂಗ್ರೆಸ್ ಮುಖಂಡರು ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link