ರಾಜ್ಯದಲ್ಲಿ ಮುಂಗಾರು ಮಳೆಗೆ ಬಲಿಯಾದವರರೆಷ್ಟು ಗೊತ್ತೆ…?

ಬೆಂಗಳೂರು

       ಸದ್ಯ ಸುರಿಯುತ್ತಿರುವ  ಮುಂಗಾರು ಮಳೆಗೆ ಜೂನ್ 1 ರಿಂದ ಇಲ್ಲಿಯವರೆಗೆ ಮೂವತ್ತೆಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 35 ಮಂದಿ ಗಾಯಗೊಂಡಿದ್ದಾರೆ. 57 ಮನೆಗಳು ಸಂಪೂರ್ಣ ಹಾನಿ, 208 ತೀವ್ರ ಹಾನಿ ಮತ್ತು 2,682 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಮತ್ತು 105 ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ ಎಂದಿದ್ದಾರೆ.

     ರಾಜ್ಯದಲ್ಲಿನ ಮಳೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಕ್ಷಣದ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಾಣಹಾನಿಯನ್ನು ತಡೆಗಟ್ಟುವ ಉದ್ದೇಶದಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದ್ದಾರೆ.

    ರಾಜ್ಯದ ಹವಾಮಾನ ಮತ್ತು ಬೆಳೆ ಸ್ಥಿತಿಯನ್ನು ನಿರ್ಣಯಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ದರಾಮಯ್ಯ, 185 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಮತ್ತು 356 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ. ಒಟ್ಟಾರೆಯಾಗಿ, ಮಳೆ ಮತ್ತು ಪ್ರವಾಹದಿಂದಾಗಿ 541 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

    ಒಟ್ಟು 11,995 ವಿದ್ಯುತ್ ಕಂಬಗಳು, 894 ಟ್ರಾನ್ಸ್‌ಫಾರ್ಮರ್‌ಗಳು ಮತ್ತು 215 ಕಿಲೋಮೀಟರ್ ವಿದ್ಯುತ್ ಲೈನ್ ಹಾನಿಯಾಗಿದೆ. ಸೇತುವೆಗಳು, ತರಗತಿ ಕೊಠಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ರಾಜ್ಯದಲ್ಲಿ ಉಂಟಾದ ವಿನಾಶದ ವಿವರಗಳನ್ನು ಪಟ್ಟಿ ಮಾಡಿದ್ದಾರೆ. ಜೊತೆಗೆ “ಸರ್ಕಾರದಿಂದ ಎರಡು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ, ಅಲ್ಲಿ ಸುಮಾರು 50 ಜನರು ಆಶ್ರಯ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಜೂನ್‌ನಲ್ಲಿ ಶೇ.56 ರಷ್ಟು ಕೊರತೆ ಮಳೆಯಾಗಿದ್ದು, ಬಿತ್ತನೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗಿದೆ. ಆದರೆ ಜುಲೈನಲ್ಲಿ ರಾಜ್ಯದಲ್ಲಿ ಇದುವರೆಗೆ 313 ಮಿಮೀ ಮಳೆಯಾಗಿದೆ. ಇದು ವಾಡಿಕೆಗಿಂತ 37 ರಷ್ಟು ಹೆಚ್ಚು. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಬೀದರ್ ನಲ್ಲಿ ಹೆಚ್ಚಿನ ಮಳೆಯಾಗಿದ್ದು, 21 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದ್ದು, ಆರು ಜಿಲ್ಲೆಗಳಲ್ಲಿ ಕಡಿಮೆಯಾಗಿದೆ.

    ಜೂನ್ ಮತ್ತು ಜುಲೈನಲ್ಲಿ ಶೇ.80ಕ್ಕೂ ಹೆಚ್ಚು ಬಿತ್ತನೆಯಾಗಿದೆ ಎಂದು ತಿಳಿಸಿದ್ದಾರೆ. ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ಇನ್ನೆರಡು ದಿನದಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಒಂದು ವಾರದವರೆಗೆ ಮಳೆ ಮುಂದುವರಿಯಬಹುದು. ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಎಲ್ಲ ಜಲಾಶಯಗಳು ಶೇ.60 ರಿಂದ 70ರಷ್ಟು ಭರ್ತಿಯಾಗಿದ್ದು, ವಾರದಲ್ಲಿ 227 ಟಿಎಂಸಿ ನೀರು ಜಲಾಶಯಗಳಿಗೆ ಹರಿದು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

    ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ತಿಳಿಸಿದ ಸಿದ್ದರಾಮಯ್ಯ, ಜಾನುವಾರುಗಳ ನಷ್ಟ, ಹಾನಿಗೊಳಗಾದ ಮನೆಗಳ ಬಗ್ಗೆ ಅಂದಾಜು ಮಾಡಿ ಪರಿಹಾರ ನೀಡಲು ಸೂಚನೆ ನೀಡಿದ್ದು, ಸೇತುವೆಗಳು ಮುಳುಗಿರುವ ಸ್ಥಳಗಳಲ್ಲಿ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಪರ್ಯಾಯ ರಸ್ತೆಗಳನ್ನು ಒದಗಿಸುವಂತೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಣಹಾನಿ ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap