ಮಿಜೋರಾಂ :
ಪ್ರಪಂಚ ಬೆಳೆಯುತ್ತಿದೆ. ದೇಶವೂ ಹತ್ತಾರು ಬೆಳೆವಣಿಗೆಗೆ ಮೈಯೊಡ್ಡಿ ಮುನ್ನುಗ್ಗುತ್ತಿದೆ. ಆದರೆ ಜನಸಂಖ್ಯೆ ಹೆಚ್ಚಾದಷ್ಟು ಕುಟುಂಬಗಳು ಚಿಕ್ಕದಾಗುತ್ತಿವೆ. ಅವಿಭಕ್ತ ಕುಟುಂಬಗಳು ಎಲ್ಲೆಡೆ ಒಡೆದು ಹೋಳಾಗುತ್ತಿವೆ.
ಮನೆಯಲ್ಲಿ ಹತ್ತಿಪ್ಪತ್ತು ಜನರು ಇರುತ್ತಿದ್ದ ಕಾಲ ಈಗ ಮರೆಯಾಗಿದ್ದು, ಗಂಡ , ಹೆಂಡತಿ , ಮಕ್ಕಳಿಗಷ್ಟೇ ಮನೆಗಳು ಸೀಮಿತ ಆಗ್ತಿವೆ. ಆದ್ರೆ, ಇಲ್ಲೊಂದು ಮನೆಯಲ್ಲಿ ಅನಾಮತ್ತು 167 ಜನರು ವಾಸವಿದ್ದಾರೆ. ಇಡೀ ಮನೆಗೆ ಒಬ್ಬನೇ ಯಜಮಾನ. ಅಷ್ಟಕ್ಕೂ ವಿಶ್ವದ ಅತಿದೊಡ್ಡ ಕುಟುಂಬ ಇರೋದು ನಮ್ಮ ದೇಶದಲ್ಲೇ.
ಈ ಮನೆಯಲ್ಲಿ ಇರೋದು ಬರೋಬ್ಬರಿ 167 ಜನರು. ಇವರಿಗೆಲ್ಲ ಒಬ್ಬನೇ ಯಜಮಾನ.. ಆತನ ಹೆಸರೇ ಜಿಯೋನ್ ಚಾನ್.. ಹೌದು.. ಮಿಜೋರಾಂನಲ್ಲಿರುವ ಜಿಯೋನ್ ಚಾನ್‌ನ ಕುಟುಂಬ ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಸಂಸಾರ ಎನ್ನಲಾಗ್ತಿದೆ.ಯಾಕಂದ್ರೆ, ಮನೆಯ ಯಜಮಾನ ಆಗಿರುವ ಚಾನ್‌ಗೆ 39 ಮಂದಿ ಪತ್ನಿಯರಿದ್ದಾರೆ. 39 ಪತ್ನಿಯರಿಗೆ ಒಟ್ಟು 94 ಮಕ್ಕಳಿದ್ದಾರೆ.. ಇನ್ನು ಜಿಯೋನ್ ಚಾನ್‌ಗೆ ಒಟ್ಟು 33 ಮೊಮ್ಮಕ್ಕಳಿದ್ದಾರೆ.
ಹಾಗೇ, ಓರ್ವ ಮರಿ ಮೊಮ್ಮಗುವು ಕೂಡ ಇದೆ. ಮಿಜೋರಾಂನಲ್ಲಿರುವ ಈ ಜಿಯೋನ್ ಚಾನ್ ಕುಟುಂಬದ ಬಗ್ಗೆ ವರ್ಲ್ಡ್ ರೆಕಾರ್ಡ್ ಅಕಾಡೆಮಿ, ವಾಲ್ ಸ್ಟ್ರೀಟ್ ಜರ್ನಲ್ ಹಾಗೂ ಲಂಡನ್ ವರ್ಲ್ಡ್ ರೆಕಾರ್ಡ್ ಈಗಾಗಲೇ ಗುರುತಿಸಿ ಬರೆದಿವೆ. ಜಿಯೋನ್ ಚಾನ್‌ರದ್ದು ವಿಶ್ವದ ಅತಿದೊಡ್ಡ ಕುಟುಂಬ ಅಂತ ವರದಿ ಪ್ರಕಟಿಸಿದ್ದಾರೆ. ಆದ್ರೆ ಜಿಯೋನ್ ಚಾನ್ ಅವರು ಈ ಬಗ್ಗೆ ಗಿನ್ನಿಸ್ ದಾಖಲೆಯನ್ನು ಪಡೆಯುವುದಕ್ಕೆ ನಿರಾಕರಿಸಿದ್ದಾರಂತೆ.
ವಿಶ್ವದ ಅತಿದೊಡ್ಡ ಕುಟುಂಬ ಅಂತ ಜಿಯೋನ್ ಅವರನ್ನ ಗುರುತಿಸಲು ಗಿನ್ನಿಸ್ ದಾಖಲೆಯ ಅಧಿಕಾರಿಗಳು ಮುಂದಾಗಿದ್ದಾರೆ. ಆದ್ರೆ ಈ ಬಗ್ಗೆ ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಜಿಯೋನ್ ಚಾನ್ ಅವರು ಹಿಂದೇಟು ಹಾಕಿದ್ದಾರಂತೆ.
ಅಂದಹಾಗೇ ಜಿಯೋನ್ ಚಾನ್ ಅವರು ಕ್ರಿಶ್ಚಿಯನ್ ಸಮುದಾಯದವರು. ಮಿಜೋರಾಂನ ರಾಜಧಾನಿ ಆಗಿರುವ ಐಜೋಲ್‌ನಿಂದ ಸುಮಾರು 55 ಕಿಲೋ ಮೀಟರ್ ದೂರದಲ್ಲಿರುವ ಭಕ್ತಾವಾಂಗ್ ಲ್ಯಾಂಗ್ಯೂಮ್ ಪ್ರದೇಶದಲ್ಲಿ ಜಿಯೋನ್ ಕುಟುಂಬ ವಾಸವಿದೆ.
ಅಂದಹಾಗೇ, ಜಿಯೋನ್ ಅವರ ಮನೆತನದಲ್ಲಿ ಬಹುಪತ್ನಿತ್ವ ಇದೆ. ಚಾನ್ ಅವರು ತಮ್ಮ 17ನೇ ವಯಸ್ಸಿನಲ್ಲಿ ಮೊದಲ ಮದ್ವೆ ಆದ್ರು. ಅವರ ಪತ್ನಿ ಹೆಸ್ರು ಜಾತಿಹ್ಯಾಗಿ ಅಂತ. ಜಾತಿಹ್ಯಾಗಿ ಅವರು ಜಿಯೋನ್ ಕುಟುಂಬದ ಮುಖ್ಯ ಪತ್ನಿ ಆಗಿದ್ದಾರೆ. ಜಾತಿಹ್ಯಾಗಿ ಅವರ ಮಾರ್ಗದರ್ಶನದಂತೆ ಉಳಿದವರು ನಡೆಯುತ್ತಾರೆ. ಜಿಯೋನ್ ಅವರು ಮೊದಲ ಮದ್ವೆ ಬಳಿಕ ಪ್ರತಿ ವರ್ಷವೂ ಒಬ್ಬೊಬ್ಬ ಮಹಿಳೆಯನ್ನ ವರಿಸುತ್ತಲೇ ಇದ್ರು. ಅವರು ಕೊನೆಯ ಮದ್ವೆ ಆದದ್ದು 2005ರಲ್ಲಿ. ಅವರ ಕೊನೆಯ ಪತ್ನಿಯ ವಯಸ್ಸು ಆಗ 25 ವರ್ಷ.
ಇನ್ನು, 167 ಜನರ ಕುಟುಂಬ ಒಂದೇ ಮನೆಯಲ್ಲಿ ಹೇಗಿರುತ್ತೆ ಅನ್ನೋದು ನಿಮಗೆ ನಿಜಕ್ಕೂ ಅಚ್ಚರಿ ಹುಟ್ಟಿಸಬಹುದು. ಪತ್ನಿಯರು, ಮಕ್ಕಳು, ಮೊಮ್ಮಕ್ಕಳೆಲ್ಲವೂ ಒಂದೇ ನಾಲ್ಕು ಅಂತಸ್ಥಿನ ಒಂದೇ ಮನೆಯಲ್ಲಿ ವಾಸವಿದ್ದಾರೆ. ಚುಚಾನ್ ಥಾರ್ ರನ್ನ ಅಂತ ಕರೆಯಲ್ಪಡುವ ಇವರ ಮನೆ ನಾಲ್ಕು ಮಹಡಿಯಲ್ಲಿದೆ. ಮನೆಯಲ್ಲಿ ಒಟ್ಟು 100 ರೂಮ್‌ಗಳಿವೆ. ಈ ನೂರು ಕೋಣೆಯಲ್ಲಿ ಮನೆಯ 167 ಜನರು ವಾಸವಿದ್ದಾರೆ.
ಇನ್ನು, ಚಾನ್ ಅವರಿಗೆ ಪ್ರತ್ಯೇಕ ಕೋಣೆಯಿದ್ದು, ಅವರ ಪತ್ನಿಯರು ದಿನಕ್ಕೊಬ್ಬರಂತೆ ರೂಂ ಶೇರ್ ಮಾಡಿಕೊಳ್ತಾರಂತೆ. ಇನ್ನು ಈ ಅತಿದೊಡ್ಡ ಕುಟುಂಬದಲ್ಲಿ ಅಡುಗೆ ಹೇಗೆ ಮಾಡ್ತಾರೆ ಅಂತ ನಿಮಗೆ ಪ್ರಶ್ನೆ ಮೂಡಬಹುದು. ಆದ್ರೆ ಇವರು ಅದಕ್ಕೂ ಪ್ಲ್ಯಾನಿಂಗ್ ಮಾಡಿಕೊಂಡಿದ್ದಾರೆ. ಮನೆಯ 167 ಜನರಿಗೆ ಪತ್ನಿಯರೆಲ್ಲ ಸೇರಿ ಅಡುಗೆ ಮಾಡುತ್ತಾರೆ. ಸೊಸೆಯಂದಿರು ಸ್ವಚ್ಚತೆ ಕೆಲಸವನ್ನು ನಿಭಾಯಿಸುತ್ತಾರೆ.
ಪ್ರತಿಯೊಬ್ಬರಿಗೂ ಒಂದೊಂದು ಕೆಲಸವನ್ನು ಹಂಚಿರುವುದರಿಂದ ಇವರಿಗೆ ಯಾರು, ಯಾವ ಕೆಲಸ ಮಾಡಬೇಕು ಅನ್ನೋವ ಪ್ರಶ್ನೆಯೂ ಮೂಡಿಲ್ಲ. ಅಂದಹಾಗೇ ಈ ಜಿಯೋನ್ ಚಾನ್ ಅವರ ಕುಟುಂಬಕ್ಕೆ ಒಂದು ದಿನಕ್ಕೆ 90 ಕೆಜಿಯಷ್ಟು ಅಕ್ಕಿ ಬೇಕು. ಸುಮಾರು 58 ಕೆಜಿಯಷ್ಟು ಅಲೂಗಡ್ಡೆ ಬೇಕು. ಇವರು ತಮ್ಮ ಮನೆಗೆ ಬೇಕಾದ ತರಕಾರಿಯನ್ನ ತಾವೇ ಬೆಳೆದುಕೊಳ್ಳುತ್ತಾರೆ.
