ನವದೆಹಲಿ:
ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿ ಆಯ್ಕೆ ಬಯಸಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಾವು ಒಟ್ಟು 3.02 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಕಳೆದ 10 ವರ್ಷಗಳಿಂದ ದೇಶದ ಪ್ರಧಾನಿಯಾಗಿರುವ ಮೋದಿ, ತಾವು ಯಾವುದೇ ಜಮೀನು, ಮನೆ ಅಥವಾ ಕಾರು ಹೊಂದಿಲ್ಲ ಎಂದು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ತಮ್ಮ ಉಳಿಕೆಯ ಎಲ್ಲ ಮಾಹಿತಿಗಳನ್ನು ಚುನಾವಣಾ ಅಫಿಡವಿಟ್ ನಲ್ಲಿ ತಿಳಿಸಿರುವ ಮೋದಿ, ತಮ್ಮ ಬಳಿ ಇರುವ ನಗದು ಹಣ 52,920 ರೂ., ಗಾಂಧಿನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 73,304 ರೂ., ವಾರಾಣಸಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 7,000 ರೂ., ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,85,60,338 ರೂ. ಠೇವಣಿ, NSC ಸ್ಕ್ರೀಂ ಅಡಿಯಲ್ಲಿ 9,12,398 ರೂ. ಹೂಡಿಕೆ, 2 ಲಕ್ಷ 67 ಸಾವಿರದ 750 ರೂ. ಮೌಲ್ಯದ 4 ಚಿನ್ನದ ರಿಂಗ್ ಹೊಂದಿರುವುದಾಗಿ ಹೇಳಿದ್ದಾರೆ.
ಪ್ರಧಾನಮಂತ್ರಿ ಮೋದಿ ಅವರ ಆದಾಯ 2018-19ರಲ್ಲಿ 11.14 ಲಕ್ಷ ರೂ. ಇದ್ದುದು 2022-23ರಲ್ಲಿ 23.56 ಲಕ್ಷ ರೂ.ಗೆ ಏರಿಕೆಯಾಗಿದೆ.
ಪ್ರಧಾನಿ ಮೋದಿ 1967 ರಲ್ಲಿ ಗುಜರಾತ್ ಬೋರ್ಡ್‌ನಿಂದ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, 1978ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಮತ್ತು 1983ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಆರ್ಟ್ಸ್ ಪೂರ್ಣಗೊಳಿಸಿದ್ದೇನೆ ಎಂದು ಘೋಷಿಸಿದ್ದಾರೆ.
ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿಲ್ಲ ಎಂದು ಮೋದಿ ಹೇಳಿದ್ದಾರೆ. ಅಲ್ಲದೆ ಜಶೋದಾಬೆನ್ ಅವರನ್ನು ತಮ್ಮ ಪತ್ನಿ ಎಂದು ಮೋದಿ ಹೆಸರಿಸಿದ್ದಾರೆ.