ಬೆಂಗಳೂರು:
ಸಿಲಿಕಾನ್ ಸಿಟಿ ಜನತೆಗೆ ರಸ್ತೆ ಗುಂಡಿ ಭಾಗ್ಯಗಳಿಂದ ಮಾತ್ರ ಮುಕ್ತಿ ಸಿಗುತ್ತಿಲ್ಲ. ನಗರದಲ್ಲಿ ಮಳೆ ಸುರಿದಾಗಲೆಲ್ಲಾ ರಸ್ತೆ ಗುಂಡಿಗಳಿಂದ ಅನಾಹುತಗಳು ಸಂಭವಿಸುತ್ತಲೇ ಇದ್ದರೂ, ಶಾಶ್ವತ ಪರಿಹಾರಗಳು ಮಾತ್ರ ಸಿಕ್ಕಿಲ್ಲ. ನಗರದಲ್ಲಿ ಆಗಸ್ಟ್ 19ರವರೆಗೆ ಒಟ್ಟು 2,302 ಗುಂಡಿಗಳು ಪತ್ತೆಯಾಗಿದ್ದು, ಈ ಪೈಕಿ ಕೇವಲ 155 ಗುಂಡಿಗಳನ್ನಷ್ಟೇ ತುಂಬಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಳೆ ನಿಂತ ಕೂಡಲೇ ಗುಂಡಿಗಳ ಮುಚ್ಚುವ ಕಾರ್ಯ ಆರಂಭಿಸಲಾಗುತ್ತಿದೆ. ಕೆಲವೆಡೆ ಕೋಲ್ಟಡ್ ಮಿಕ್ಸ್ ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮೊಬೈಲ್ ಆ್ಯಪ್ ನಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ಬೆಂಗಳೂರು ದಕ್ಷಿಣ ಮತ್ತು ಮಹದೇವಪುರ ವಲಯದಲ್ಲಿ ಅತೀ ಹೆಚ್ಚು ದೂರುಗಳು ಕೇಳಿ ಬಂದಿದ್ದು, ತುರ್ತು ಆಧಾರದ ಮೇಲೆ ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ವಲಯದಲ್ಲಿ 476, ಮಹದೇವಪುರದಲ್ಲಿ 465 ಮತ್ತು ಇತರೆಡೆ 309 ಗುಂಡಿಗಳಿರುವ ಕುರಿತು ದೂರುಗಳು ದಾಖಲಾಗಿವೆ. ಹೊರವಲಯದಲ್ಲಿರುವ ಈ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರೀ ವಾಹನಗಳು ಸಂಚರಿಸುವುದರಿಂದ ಗುಂಡಿಗಳು ಬೀಳುತ್ತಿವೆ. ಹಾಗಾಗಿ ದೂರುಗಳು ಕೂಡ ಹೆಚ್ಚಾಗಿ ಬರುತ್ತಿವೆ. ನಿರಂತರ ಮಳೆಯಿಂದಾಗಿ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ನಡೆಸುತ್ತಿರುವ ಕಾಮಗಾರಿಗಳಿಂದಾಗಿ ಕೆಲವು ಭಾಗಗಳಲ್ಲಿ ಗುಂಡಿಗಳು ಹೆಚ್ಚಾಗಿವೆ. ಗುಂಡಿಗಳನ್ನು ಸರಿಪಡಿಸುವಂತೆ ಈ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದೇ ಗುಂಡಿ ಕುರಿತು 2000ಕ್ಕೂ ಹೆಚ್ಚು ದೂರುಗಳು ಬಂದಿದ್ದು, ಅವುಗಳನ್ನು ತಿರಸ್ಕರಿಸಲಾಗಿದೆ. ಈಗಾಗಲೇ 1,800 ಕೋಟಿ ರೂ ವೆಚ್ಚದಲ್ಲಿ ನಗರದಲ್ಲಿ ವೈಟ್ ಟಾಪಿಂಗ್ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ರಸ್ತೆ ಗುಂಡಿ ಸಮಸ್ಯೆಗಳು ಮತ್ತೆ ಎದುರಾಗುವುದಿಲ್ಲ ಎಂದರು.
ಈ ನಡುವೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಕಳೆದ ಕೆಲ ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ನಗರದ ರಸ್ತೆಗಳು ಜಲಾವೃತಗೊಂಡಿವೆ. ಸಮಸ್ಯ ಪರಿಹಾರಕ್ಕೆ ಗಮನ ಹರಿಸಿ. ಆಯಾ ವಲಯಗಳಲ್ಲಿ ಮಳೆ ನೀರು ನಿಲ್ಲುವುದು, ತಡೆಗೋಡೆಗಳ ಬಗ್ಗೆ ಸಮೀಕ್ಷೆ ನಡೆಸಿ ಪಟ್ಟಿ ಮಾಡಿ ಕೂಡಲೇ ಸರಿಪಡಿಸಬೇಕು. ಚರಂಡಿಗಳಲ್ಲಿ ಹೂಳು ಮತ್ತು ಕಸದ ಸೇರುವುದನ್ನು ತಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
