ಪಾಕಿಸ್ಥಾನ ಕಣ್ಣಿಟ್ಟ ಬಹುಮಾನ ಮೊತ್ತ ಎಷ್ಟು ಗೊತ್ತಾ….?

ನವದೆಹಲಿ:

   ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋತು ಸುಣ್ಣವಾಗಿರುವ ಪಾಕಿಸ್ತಾನ್ ತಂಡ ಇದೀಗ ಕೊನೆಯ ಲೀಗ್​ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಫೆಬ್ರವರಿ 27 ರಂದು ರಾವಲ್ಪಿಂಡಿಯಲ್ಲಿ ನಡೆಯಲಿರುವ ಈ ಪಂದ್ಯದಲ್ಲೇ ಪಾಕ್ ಪಡೆ ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ಏಕೆಂದರೆ ಈ ಮ್ಯಾಚ್​ನಲ್ಲೂ ಸೋತರೆ ಅಂಕ ಪಟ್ಟಿಯಲ್ಲಿ ಪಾಕಿಸ್ತಾನ್ ತಂಡ ಕೊನೆಯ ಸ್ಥಾನಕ್ಕೆ ಕುಸಿಯಲಿದೆ.

   ಅಷ್ಟೇ ಅಲ್ಲದೆ ಕೊನೆಯ ಸ್ಥಾನ ಪಡೆದರೆ ಐಸಿಸಿ ಕಡೆಯಿಂದ ಸಿಗುವ ಸಂಭಾವನೆಯು ಕೂಡ ಕಡಿತವಾಗಲಿದೆ. ಅಂದರೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ 59.81 ಕೋಟಿ ರೂ. ಬಹುಮಾನ ಮೊತ್ತವನ್ನು ಘೋಷಿಸಿದೆ. ಈ ಬಹುಮಾನ ಮೊತ್ತವನ್ನು ಅಂಕ ಪಟ್ಟಿಯನ್ನು ಆಧರಿಸಿ ನೀಡಲಾಗುತ್ತದೆ.

   ಅಂದರೆ ಇಲ್ಲಿ ಚಾಂಪಿಯನ್ಸ್ ಹಾಗೂ ರನ್ನರ್ ಅಪ್ ತಂಡಗಳಿಗೆ ಅತೀ ಹೆಚ್ಚು ಮೊತ್ತ, ಸೆಮಿಫೈನಲಿಸ್ಟ್​ಗಳಿಗೆ ಒಂದು ಬಹುಮಾನ ಮೊತ್ತವನ್ನು ನಿಗದಿ ಮಾಡಲಾಗಿದೆ. ಇದಾದ ಬಳಿಕ ಯಾವ ತಂಡ ಅಂಕ ಪಟ್ಟಿಯಲ್ಲಿ 5,6,7,8ನೇ ಸ್ಥಾನಗಳನ್ನು ಅಲಂಕರಿಸುತ್ತದೆಯೋ ಅದಕ್ಕನುಗುಣವಾಗಿ ಬಹುಮಾನ ಮೊತ್ತ ಸಿಗಲಿದೆ.

   ಅದರಂತೆ ಈಗಾಗಲೇ ಸೆಮಿಫೈನಲ್ ರೇಸ್​ನಿಂದ ಹೊರಬಿದ್ದಿರುವ ಪಾಕಿಸ್ತಾನ್ ತಂಡದ ಮುಂದಿನ ಟಾರ್ಗೆಟ್ 5ನೇ ಸ್ಥಾನ. ಇದಕ್ಕಾಗಿ ಪಾಕ್ ಪಡೆ ಬಾಂಗ್ಲಾದೇಶ್ ವಿರುದ್ಧ ಭರ್ಜರಿ ಜಯ ಸಾಧಿಸಲೇಬೇಕು. ಈ ಮೂಲಕ ಅಂಕ ಪಟ್ಟಿಯಲ್ಲಿ 5ನೇ ಅಥವಾ 6ನೇ ಸ್ಥಾನ ಅಲಂಕರಿಸಿದರೆ ಬಹುಮಾನ ಮೊತ್ತವಾಗಿ 3.04 ಕೋಟಿ ರೂ. ಪಡೆಯಬಹುದು.

   ಒಂದು ವೇಳೆ ಬಾಂಗ್ಲಾದೇಶ್ ವಿರುದ್ಧ ಕೂಡ ಪಾಕಿಸ್ತಾನ್ ತಂಡ ಸೋತರೆ, ಕೇವಲ 1.22 ಕೋಟಿ ರೂ. ಮಾತ್ರ ಸಿಗಲಿದೆ. ಹೀಗಾಗಿಯೇ ಪಾಕಿಸ್ತಾನ್ ಪಾಲಿಗೆ ಕೊನೆಯ ಲೀಗ್ ಪಂದ್ಯವು ಪ್ರತಿಷ್ಠೆ ಮಾತ್ರವಲ್ಲ, ಬಹುಮಾನದ ವಿಷಯದಿಂದಲೂ ಮಹತ್ವದ ಪಂದ್ಯವಾಗಿ ಮಾರ್ಪಟ್ಟಿದೆ. 

ಚಾಂಪಿಯನ್ಸ್ ಟ್ರೋಫಿ ಬಹುಮಾನ ಮೊತ್ತ:

  • ಚಾಂಪಿಯನ್ಸ್ ತಂಡಕ್ಕೆ- 19.46 ಕೋಟಿ ರೂ.
  • ರನ್ನರ್ ಅಪ್ ತಂಡಕ್ಕೆ- 9.73 ಕೋಟಿ ರೂ.
  • ಸೆಮಿಫೈನಲ್​ನಲ್ಲಿ ಸೋತ ತಂಡಗಳಿಗೆ- 4.86 ಕೋಟಿ ರೂ.
  • 5 ಮತ್ತು 6ನೇ ಸ್ಥಾನ ಪಡೆದ ತಂಡಗಳಿಗೆ- 3.04 ಕೋಟಿ ರೂ.
  • 7 ಮತ್ತು 8ನೇ ಸ್ಥಾನ ಪಡೆದ ತಂಡಗಳಿಗೆ- 1.22 ಕೋಟಿ ರೂ.