ಮೈಸೂರು:
ಜೆಡಿಎಸ್ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಜಾತ್ಯತೀತ ಜನತಾದಳ ಹುಟ್ಟಿದ ಕಥೆ ಹೇಳಿದ್ದಾರೆ.
ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ಹುಟ್ಟಿದ್ದು ಹೇಗೆ ಗೊತ್ತಾ? 2009 ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಸೇರಿದಂತೆ ಅನೇಕರು ಜನತಾದಳ ಬಿಟ್ಟು ಹೋದರು. ಬಳಿಕ ಬಿಜೆಪಿ ಜೊತೆ ಸೇರಿಕೊಂಡು ಜೆಡಿಯು ಮಾಡಿಕೊಂಡ್ರು. ಆಗ ನಾನು, ಎಚ್.ಡಿ.ದೇವೇಗೌಡರ ಬಳಿ ಹೋಗಿ ಜೆಡಿಎಸ್ ಮಾಡೋಣ ಎಂದು ಹೇಳಿದೆ. ನಂತರ ಜೆಡಿಎಸ್ ಹುಟ್ಟಿಕೊಂಡಿತು ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಕರ್ನಾಟಕದಲ್ಲಿ ಜೆಡಿಎಸ್ ಹುಟ್ಟು ಹಾಕಿದ್ದೆ ತಾವು ಎನ್ನುವ ಅರ್ಥದಲ್ಲಿ ಸಿಎಂ ಹೇಳಿದ್ದಾರೆ.
ನಾನು ಜೆಡಿಎಸ್ ಸಂಸ್ಥಾಪಕ ಅಧ್ಯಕ್ಷ ಆಗಿದ್ದೆ. ಆದರೆ ನಂತರ ನನ್ನನ್ನೇ ಪಕ್ಷದಿಂದ ಉಚ್ಛಾಟನೆ ಮಾಡಿದರು. ಜೆಡಿಎಸ್‌ನಿಂದ ನನಗೆ ಅನ್ಯಾಯ ಆಗಿದೆ ಎಂದು ಹೇಳಿದರು.
ಜೆಡಿಎಸ್ ಅನ್ನು ನಾನು ಬಿಡಿಲಿಲ್ಲ. ಮಿಸ್ಟರ್ ದೇವೇಗೌಡ ನಮ್ಮನ್ನು ಉಚ್ಚಾಟಿಸಿ ಹೊರಗೆ ಕಳಿಸಿದರು. ಆದರೆ, ಈಗ ನಾನೇ ಜೆಡಿಎಸ್ ಬಿಟ್ಟು ಬಂದೆ ಅಂತಾ ಸುಳ್ಳು ಹೇಳುತ್ತಾರೆ. ಉಪಯೋಗಿಸಿ ಕೊಳ್ಳೋದು ಬಿಸಾಕುವುದು ಜೆಡಿಎಸ್ ಕೆಲಸ. ಬಿಜೆಪಿ ಕೋಮುವಾದಿ ಪಕ್ಷ.
ಹೀಗಾಗಿ ಅವರ ಜೊತೆ ಹೋದ ಜೆಡಿಎಸ್ ಜಾತ್ಯತೀತ ಪದ ಕೈ ಬಿಡಲಿ ಅಂತಾ ಹೇಳಿದೆ. ಅದಕ್ಕೆ ನನ್ನ ಗರ್ವಭಂಗ ಮಾಡಿ ಅಂತಾ ದೇವೇಗೌಡರು ಹೇಳುತ್ತಾರೆ. 2006ರ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ನೀವು ನನ್ನ ಕೈ ಹಿಡಿಯದೆ ಇದ್ದಿದ್ದರೆ ನನ್ನ ರಾಜಕೀಯ ಅಂತ್ಯವಾಗುತ್ತಿತ್ತು. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಯಡಿಯೂರಪ್ಪ, ಕುಮಾರಸ್ವಾಮಿ, ದೇವೇಗೌಡರು ಎಲ್ಲಾ ಸೇರಿ ನನ್ನ ಸೋಲಿಸೋಕೆ ಬಂದ್ರು. ಆದರೆ ಜನ ನನ್ನ ಕೈ ಬಿಡಲಿಲ್ಲ. ಹೀಗಾಗಿ ಎರಡು ಬಾರಿ ಸಿಎಂ ಆಗಿದ್ದೇನೆ ಎಂದು ಈ ಹಿಂದಿನ ರಾಜಕಾರಣವನ್ನು ಸಿಎಂ ಮೆಲುಕು ಹಾಕಿದರು.