ವಿಧಾನಸಭೆಯಲ್ಲಿ ಕಣ್ಣೀರಿಟ್ಟ ಡಿಸಿಎಂ : ಕಾರಣ ಗೊತ್ತ….?

ಬೆಂಗಳೂರು

        ವಿಧಾನಸಭಾ ಚುನಾವಣೆಗೂ ಮುನ್ನ ನಿಧನರಾದ ಮಾಜಿ ಲೋಕಸಭಾ ಸದಸ್ಯರು, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧೃವನಾರಾಯಣ ಅವರನ್ನು ನೆನೆದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿಂದು ಕಣ್ಣೀರಿಟ್ಟರು.

      ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯದ ಮೇಲೆ ಮಾತನಾಡಿದ ಶಿವಕುಮಾರ್, ಧೃವನಾರಾಯಣ ಅವರ ಜತೆಗಿನ ಒಡನಾಟ, ಅವರ ಕೆಲಸದ ವೈಖರಿಯನ್ನು ನೆನೆದು ಭಾವುಕರಾದರು. ಸಹೋದರನಂತಿದ್ದ ಧೃವನಾರಾಯಣ ಅವರ ಅಗಲಿಕೆ ನನ್ನ ಮನಸ್ಸಿಗೆ ಬಹಳ ನೋವು ತಂದಿದೆ. ನನಗೆ ರಾಜಕಾರಣದಲ್ಲಿ ಧೃವನಾರಾಯಣ್ ಸಹೋದರನಾಗಿದ್ದ.

     ಧೃವನಾರಾಯಣ್ ಅವರು ನನ್ನ ಜತೆ ಕಾರ್ಯಾಧ್ಯಕ್ಷರಾಗಿದ್ದರು. ಅವರಿಗೆ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲಾ ಜವಾಬ್ದಾರಿ ವಹಿಸಿದ್ದೆ. ಈ ಎಲ್ಲಾ ಕಡೆಗಳಲ್ಲಿ ಅವರು ಶುದ್ಧ ರಾಜಕಾರಣ ಮಾಡಿದ್ದಾರೆ. ಅವರಿಗೆ ವಹಿಸಿದ್ದ ಪ್ರದೇಶದಲ್ಲಿ ಸುಮಾರು 75% ರಷ್ಟು ಸದಸ್ಯರು ಆಯ್ಕೆಯಾಗಿ ಬಂದಿದ್ದಾರೆ ಎಂದರು.

    ಇಂದು ನಾನು ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರಿಯುತ್ತಿದ್ದು, ನನ್ನ ನಂತರ ಈ ಸ್ಥಾನದಲ್ಲಿ ಧೃವನಾರಾಯಣ ಅವರನ್ನು ಕೂರಿಸಬೇಕು ಎಂಬ ಆಲೋಚನೆ ನನ್ನ ತಲೆಯಲ್ಲಿತ್ತು. ನನ್ನ ಜತೆ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಸಚಿವ ಸಂಪುಟದ ಸದಸ್ಯರಾಗಿ ಕೂತಿದ್ದಾರೆ. ಧೃವನಾರಾಯಣ ಅವರು ಬದುಕಿದ್ದರೆ, ಅವರು ಕೂಡ ಈ ಸದನದಲ್ಲಿ ಸಚಿವ ಸ್ಥಾನದಲ್ಲಿ ಕೂರುವುದನ್ನು ಯಾರಿಂದಲೂ ತಪ್ಪಿಸಲು ಆಗುತ್ತಿರಲಿಲ್ಲ.

    ಪಕ್ಷದ ಸಂಘಟನೆಯಲ್ಲಿ ಅವರಿಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ನಮ್ಮ ಪಕ್ಷದ ವತಿಯಿಂದ ಆರೋಗ್ಯ ಹಸ್ತ ಕಾರ್ಯಕ್ರಮ ಮಾಡಿದಾಗ, ಅವರು ಬಹಳ ಜವಾಬ್ದಾರಿಯಿಂದ ಕೆಲಸ ಮಾಡಿದ್ದರು. ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಲ್ಲಿ 36 ಜನ ಸತ್ತಾಗ ಆಗಿನ ಮಂತ್ರಿಗಳು ಕೇವಲ 3 ಮಂದಿ ಮಾತ್ರ ಸತ್ತಿದ್ದಾರೆ ಎಂದು ಹೇಳಿದ್ದರು.

    ಆದರೆ ಧೃವನಾರಾಯಣ ಅವರು ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಹೋಗಿ ಪರಿಶೀಲಿಸುವಂತೆ ಮಾಡಿದರು. ನಂತರ ಈ ದುರಂತದಲ್ಲಿ 36 ಮಂದಿ ಸತ್ತಿರುವ ಬಗ್ಗೆ ಸತ್ಯಾಂಶ ಬಯಲಿಗೆ ಬಂದಿತು. ಪ್ರತಿ ಹಂತದಲ್ಲಿ ಅವರು ನಗುತ್ತಲೇ ಕೆಲಸ ಮಾಡಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಮಾತ್ರವಲ್ಲ, ರಾಜ್ಯ ರಾಜಕಾರಣದಲ್ಲೂ ಧೃವತಾರೆ. ನಮಗೆ ಅವರ ಜತೆ ಇದ್ದ ಸ್ನೇಹ ಸಂಬAಧ ಬಣ್ಣಿಸಲಾಗುವುದಿಲ್ಲ. ಆತ ಒಂದು ದಿನ ಬೇರೆಯವರ ಮನಸ್ಸು ನೋಯಿಸಲಿಲ್ಲ ಎಂದು ಬಾವುಕರಾಗಿ ನುಡಿದರು.

   ವಿದ್ಯಾರ್ಥಿ ನಾಯಕನಾಗಿದ್ದ ಧೃವನಾರಾಯಣ್ ಬಿಜೆಪಿಗೆ ಹೋಗಿದ್ದರು, ನಾನು ಅವರನ್ನು ಕರೆತಂದಿದ್ದೆ. ಎಸ್.ಎಂ. ಕೃಷ್ಣಾ ಅವರ ಕಾಲದಲ್ಲಿ ಅವರಿಗೆ ಟಿಕೆಟ್ ಕೊಡಿಸಿ ಸ್ಪರ್ಧಿಸುವಂತೆ ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇವಲ 1 ಮತದ ಅಂತರದಲ್ಲಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದರು. ಅವರು ಪರಿಶಿಷ್ಟ ಜಾತಿ ಸಮುದಾಯದಿಂದ ಬಂದಿದ್ದರೂ ಆತ ಜಾತಿ ವಿಚಾರವಾಗಿ ಎಂದೂ ಮಾತನಾಡಲಿಲ್ಲ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡ ಶ್ರೇಷ್ಠ ನಾಯಕ.

   ಅವರಿಗೆ ಈ ವಿಧಾನಸಭೆಯಲ್ಲಿ ಸಂತಾಪ ಸೂಚಿಸುತ್ತಿರುವುದು ನೋವು ಆಗುತ್ತಿದೆ. ಅವರ ಅಗಲಿಕೆಯಿಂದ ನನಗೆ ಹಾಗೂ ಅವರ ಸಾವಿರಾರು ಹಿಂಬಾಲಕರಿಗೆ ನೋವಾಗಿದ್ದು, ಇದನ್ನು ತಡೆದುಕೊಳ್ಳುವ ಶಕ್ತಿಯನ್ನು ಕರುಣಿಸಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

   ಅಂಜನಮೂರ್ತಿ ಹಾಗೂ ನಾನು ಒಟ್ಟಿಗೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೆವು. ಅವರು ಬಹಳ ವರ್ಷಗಳ ಕಾಲ ಬೆಂಗಳೂರಿನಲ್ಲಿ ರಾಜಕಾರಣ ಮಾಡಿದ್ದಾರೆ. ಇಂದು ಅವರು ನಮ್ಮನ್ನು ಅಗಲಿದ್ದಾರೆ. ಮೂಲತಃ ನ್ಯಾಯವಾದಿಗಳಾಗಿದ್ದ ಅಂಜನಮೂರ್ತಿ ಅವರು, ತಮ್ಮದು ಮೀಸಲು ಕ್ಷೇತ್ರವಾದರೂ ಒಂದೇ ಒಂದು ಪಿಟಿಸಿಎಲ್ ಪ್ರಕರಣಕ್ಕೆ ಅವಕಾಶ ನೀಡುತ್ತಿರಲಿಲ್ಲ. ಅವರು ಸಚಿವರಾಗಿ, ಉಪಸಭಾಪತಿಗಳಾಗಿ ಕೆಲಸ ಮಾಡಿದ್ದಾರೆ.

    ಇನ್ನು ನನ್ನ ಮತ್ತೊಬ್ಬ ಸ್ನೇಹಿತ ಇನಾಮ್ದಾರ್, ವೆಂಕಟೇಶ್ ಸ್ವಾಮಿ, ಭುಜಂಗಶೆಟ್ಟಿ, ಸಭಾಪತಿ ಅವರು ಕೂಡ ನಮ್ಮ ಜತೆ ಶಾಸಕರಾಗಿ, ಸಭಾಪತಿಯಾಗಿ ಕೆಲಸ ಮಾಡಿದ್ದಾರೆ. ಅವರು ಕೂಡ ನಮ್ಮನ್ನು ಅಗಲಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುತ್ತೇನೆ.? ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link