ನವದೆಹಲಿ:
ಜಗತ್ತಿನ ಅತಿದೊಡ್ಡ ಜನಸಂಖ್ಯಾ ದೇಶ ಎನಿಸಿಕೊಂಡಿರುವ ಭಾರತ ಹಲವು ದೇಶಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿರುವುದು ಎಲ್ಲರಿಗೂ ತಿಳಿದೇ ಇದೆ. ಚೀನಾ, ಭೂತಾನ್, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ದೇಶಗಳೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿದ್ದು, ಈ ಗಡಿ ಭಾಗದ ಹಳ್ಳಿಗಳ ಜೀವನ ತುಂಬಾ ವಿಭಿನ್ನವಾಗಿದೆ.ಅಂತಹ ಗ್ರಾಮವೊಂದರ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ನಾಗಲ್ಯಾಂಡ್ನ ಮೋನ್ ಜಿಲ್ಲೆಯ ದೊಡ್ಡ ಗ್ರಾಮಗಳಲ್ಲಿ ಒಂದಾದ ‘ಲಾಂಗ್ವಾ’ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಗ್ರಾಮ ಭಾರತ ಮತ್ತು ಮ್ಯಾನ್ಮರ್ ನಡುವೆ ನೆಲೆಸಿದೆ. ಇದು ಎರಡೂ ದೇಶಗಳ ಗಡಿಯನ್ನು ಹಂಚಿಕೊಂಡಿದೆ. ಇಲ್ಲಿ ವಾಸಿಸುವವರು ಒಂದು ದೇಶದಲ್ಲಿ ತಿನ್ನುತ್ತಾರೆ ಮತ್ತು ಇನ್ನೊಂದು ದೇಶದಲ್ಲಿ ಮಲಗುತ್ತಾರೆ. ಏಕೆಂದರೆ ಅವರ ಮನೆಗಳು ಮತ್ತು ಹೊಲಗಳು ಎರಡು ದೇಶಗಳ ನಡುವೆ ಹಂಚಿಹೋಗಿವೆ.
ಈ ಲಾಂಗ್ವಾ ಗ್ರಾಮದ ಮೂಲಕ ಅಂತಾರಾಷ್ಟ್ರೀಯ ಗಡಿ ಹಾದು ಹೋಗಿದೆ. ಈ ಗ್ರಾಮದ ಮುಖ್ಯಸ್ಥನ ಮನೆ ಸೇರಿದಂತೆ ಬಹುತೇಕ ಮನೆಗಳು ಎರಡು ರಾಜ್ಯಗಳ ನಡುವೆ ವಿಂಗಡಿಸಲಾಗಿದೆ.
ಲಾಂಗ್ವಾವನ್ನು ಇನ್ನಷ್ಟು ಅಸಾಮಾನ್ಯವಾಗಿಸುವ ಸಂಗತಿ ಯಾವುದೆಂದರೆ ಇಲ್ಲಿನ ನಿವಾಸಿಗಳು ದ್ವಿಪೌರತ್ವವನ್ನು ಆನಂದಿಸುತ್ತಾರೆ. ವೀಸಾ ಅಗತ್ಯವಿಲ್ಲದೇ ಎರಡು ದೇಶಗಳ ನಡುವೆ ಪ್ರಯಾಣಿಸಲು ಮುಕ್ತರಾಗಿದ್ದಾರೆ. ಈ ಹಳ್ಳಿಯ ಜನರು ಭಾರತ ಮತ್ತು ಮ್ಯಾನ್ಮಾರ್ ನಡುವೆ ಯಾವುದೇ ಅಡಚಣೆಯಿಲ್ಲದೆ ಮುಕ್ತವಾಗಿ ಓಡಾಡಬಹುದು.
ಈ ಹಳ್ಳಿಯ ಕೆಲವರು ಮ್ಯಾನ್ಮಾರ್ ಸೇನೆಯ ಸದಸ್ಯರಾಗಿದ್ದಾರೆ. ಇದು ಅಪರೂಪದ ಸನ್ನಿವೇಶವಾಗಿದ್ದು, ಸಮುದಾಯವು ಎರಡೂ ದೇಶಗಳೊಂದಿಗೆ ಹೊಂದಿರುವ ನಿಕಟ ಸಂಬಂಧವನ್ನು ಇದು ಎತ್ತಿ ತೋರಿಸುತ್ತದೆ. ಲಾಂಗ್ವಾ ಜನರು ತಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಹೆಸರುವಾಸಿಯಾದ ಕೊನ್ಯಾಕ್ ಬುಡಕಟ್ಟಿಗೆ ಸೇರಿದವರಾಗಿದ್ದಾರೆ.
