ಬೆಂಗಳೂರು
ವಿದೇಶಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಇಂದು ಸೋಮವಾರ ಯಾವ ವ್ಯತ್ಯಾಸ ಕಾಣದಿದ್ದರೂ ಭಾರತದಲ್ಲಿ ಭರ್ಜರಿ ಏರಿಕೆ ಆಗಿದೆ. ಇಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 20 ರೂನಷ್ಟು ಏರಿಕೆ ಆಗಿದೆ. ಆಭರಣ ಚಿನ್ನದ ಬೆಲೆ 7,000 ರೂ ಗಡಿಗೆ ಇನ್ನಷ್ಟು ಸಮೀಪ ಹೋಗಿದೆ. ಅಪರಂಜಿ ಚಿನ್ನ ಬೆಲೆ 7,600 ರೂ ಗಡಿ ದಾಟಿಬಿಟ್ಟಿದೆ. ಭಾರತದಲ್ಲಿ ಇದು ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ. ಆದರೆ, ಬೆಳ್ಳಿ ಬೆಲೆ ನಿನ್ನೆ ವಾರಾಂತ್ಯದ ದರದಲ್ಲೇ ಮುಂದುವರಿದಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 69,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 75,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 69,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,500 ರುಪಾಯಿಯಲ್ಲಿ ಇದೆ.
ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.