ಕಾರವಾರ:
ಬೆನ್ನಿನ ಮೇಲೆ ಎಲೆಕ್ಟ್ರಾನಿಕ್ ಚಿಪ್ ಹೊಂದಿದ್ದ ಬೃಹತ್ ಗಾತ್ರದ ರಣಹದ್ದು ರವಿವಾರ ನಗರದಲ್ಲಿ ಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿತ್ತು.ಕೈಗಾ ಅಣು ವಿದ್ಯುತ್ ಕೇಂದ್ರ ಹಾಗೂ ಕದಂಬ ನೌಕಾನೆಲೆ ಸಮೀಪದಲ್ಲೇ ಈ ಹದ್ದು ಕಾಣಿಸಿಕೊಂಡಿದ್ದರಿಂದ ದೇಶದ ಸೂಕ್ಷ್ಮ ಮಾಹಿತಿ ಸಂಗ್ರಹಿಸಲು ಶತ್ರು ದೇಶದಿಂದ ರಣಹದ್ದು ಬಳಸಿರಬಹುದೇ ಎಂಬ ಶಂಕೆ ಮೂಡಿತ್ತು.
ಆದರೆ ಸ್ಥಳೀಯರ ಅರಣ್ಯಾಧಿಕಾರಿಗಳು, ಈ ರಣಹದ್ದು ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನವನದಲ್ಲಿ ರಣಹದ್ದುಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ತಂಡಕ್ಕೆ ಸೇರಿದ್ದು ಎಂದು ತಿಳಿಸಿದ್ದಾರೆ.
ರಣಹದ್ದುಗಳ ಹೆಜ್ಜೆ ಮೂಡದ ಹಾದಿ, ಅವುಗಳ ಹಾರಾಟದ ವ್ಯಾಪ್ತಿ, ಸಂತಾನೋತ್ಪತ್ತಿ ಪ್ರಕ್ರಿಯೆ ಹಾಗೂ ಯಾವ ತಿಂಗಳಲ್ಲಿ ಯಾವ ಸ್ಥಳ ಹುಡುಕಿ ಹೊರಡುತ್ತವೆ ಎಂಬ ಕುರಿತು ಅಧ್ಯಯನ ನಡೆಯುತ್ತಿದೆ. ಅದಕ್ಕಾಗಿ ಈ ರಣ ಹದ್ದುಗಳಿಗೆ ಫ್ಲೈಯಿಂಗ್ ಟ್ರ್ಯಾಕ್ ಯಂತ್ರ ಟ್ಯಾಗ್ ಮಾಡಲಾಗಿತ್ತು ಎನ್ನಲಾಗಿದೆ.