ಸೇಲಂ:
ಸೂಟ್ಕೇಸ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ನಾಲ್ಕು ದಿನಗಳ ನಂತರ ತಮಿಳುನಾಡಿನ ಯೇರ್ಕಾಡ್ ಪಟ್ಟಣ ಪೊಲೀಸರು ಭಾನುವಾರ (ಮಾರ್ಚ್ 24) ಪ್ರಕರಣವನ್ನು ಭೇದಿಸಿದ್ದಾರೆ. ಸಂತ್ರಸ್ತೆಯನ್ನು ಗುರುತಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಮೃತಳನ್ನು ಎನ್. ಸುಬ್ಬಲಕ್ಷ್ಮೀ (30) ಎಂದು ಗುರುತಿಸಲಾಗಿದೆ. ಈಕೆ ಕೊಯಮತ್ತೂರು ಮೂಲದವಳು. ಆರೋಪಿಗಳಿಬ್ಬರನ್ನು ತಿರುವರೂರ್ ಜಿಲ್ಲೆಯ ಮನ್ನಾರ್ಗುಡಿ ನಿವಾಸಿ ಎಂ. ನಟರಾಜನ್ (32) ಮತ್ತು ಆತನ ಸಂಬಂಧಿ ಮನ್ನಾರ್ಗುಡಿ ಮೂಲದ ಎಸ್. ಕನಿವಳಗನ್ (35) ಎಂದು ಗುರುತಿಸಲಾಗಿದೆ.
ಈ ಪ್ರಕರಣದ ಬಗ್ಗೆ ಸೇಲಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಕೆ. ಅರುಣ್ ಕಬಿಲನ್ ಮಾತನಾಡಿ, ಕತಾರ್ನಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡುವಾಗ ಸುಬ್ಬಲಕ್ಷ್ಮೀ ಮತ್ತು ನಟರಾಜನ್ಗೆ ಪರಿಚಯವಿತ್ತು. ನಟರಾಜನ್ಗೆ ಈಗಾಗಲೇ ಮದುವೆಯಾಗಿದ್ದು, ಮನ್ನಾರ್ಗುಡಿಯಲ್ಲಿ ಇಬ್ಬರು ಮಕ್ಕಳಿದ್ದಾರೆ. ಇನ್ನೊಂದೆಡೆ ಸುಬ್ಬಲಕ್ಷ್ಮೀ ಕೌಟುಂಬಿಕ ಕಲಹ ಕಾರಣದಿಂದ ಗಂಡ ಮತ್ತು ಇಬ್ಬರು ಮಕ್ಕಳಿಂದ ದೂರವಿದ್ದಳು. ಕತಾರ್ನಲ್ಲಿ ಇರುವಾಗಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಇಬ್ಬರು ಕೊಯಮತ್ತೂರು ನಗರದ ಪೀಲಮೇಡುವಿನಲ್ಲಿ ಲಿವಿಂಗ್ ಟುಗೆದರ್ನಲ್ಲಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಮಾರ್ಚ್ 2ರಂದು ನಟರಾಜನ್ ಮತ್ತು ಸುಬ್ಬಲಕ್ಷ್ಮೀ ನಡುವೆ ಜಗಳ ಆರಂಭವಾಯಿತು. ಮಗು ಹೊಂದಲು ಸುಬ್ಬಲಕ್ಷ್ಮೀ ಒತ್ತಾಯ ಮಾಡಿದ್ದಕ್ಕೆ ನಟರಾಜನ್ಗೆ ಕೋಪ ಬಂದು ಜಗಳವಾಡಿದನು. ಆದರೆ, ಸುಮ್ಮನಾಗದ ಸುಬ್ಬಲಕ್ಷ್ಮೀ ಒತ್ತಾಯ ಮಾಡುತ್ತಲೇ ಇದ್ದಳು. ಆದರೆ, ನಟರಾಜನ್ ಮಾತ್ರ ತಿರಸ್ಕರಿಸುತ್ತಲೇ ಇದ್ದ. ನಾಲ್ಕು ದಿನಗಳ ಹಿಂದೆ ಇದೇ ವಿಚಾರಕ್ಕೆ ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದಾಗ ಸಹನೆ ಕಳೆದುಕೊಂಡ ನಟರಾಜನ್, ಸುಬ್ಬಲಕ್ಷ್ಮೀಯ ತಲೆಯನ್ನು ಹಿಡಿದು ಗೋಡೆ ಬಲವಾಗಿ ಡಿಕ್ಕಿ ಹೊಡೆಸಿದ್ದಾರೆ. ಇದರ ಪರಿಣಾಮ ಸುಬ್ಬಲಕ್ಷ್ಮೀ ಸ್ಥಳದಲ್ಲೇ ಕುಸಿದುಬಿದ್ದು ಕೊನೆಯುಸಿರೆಳೆದಳು ಎಂದು ಎಸ್ಪಿ ಹೇಳಿದ್ದಾರೆ.
ಸುಬ್ಬಲಕ್ಷ್ಮೀ ಸಾವಿಗೀಡಾದ ಬಳಿಕ ಕನಿವಳಗನ್ ಬೆಂಬಲದೊಂದಿಗೆ ನಟರಾಜನ್, ಮೃತದೇಹವನ್ನು ಸೂಟ್ಕೇಸ್ನಲ್ಲಿ ತುಂಬಿ, ಮಾರನೇ ದಿನ ಯೇರ್ಕಾಡ್ನ ಘಾಟ್ ರಸ್ತೆಯಲ್ಲಿ ಎಸೆದು ಬಂದಿದ್ದರು. ಸೂಟ್ಕೇಸ್ ಪತ್ತೆಯಾದ ಬಳಿಕ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು. ಸೂಟ್ಕೇಸ್ ಒಳಗೆ ಪತ್ತೆಯಾದ ರಶೀದಿಯ ಜಾಡನ್ನು ಹಿಡಿದು ಹೋದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ