ಪಾಟ್ನಾ:
ಸಮಸ್ತಿಪುರದ ಲೋಕ ಜನಶಕ್ತಿ ಪಕ್ಷದ(ರಾಮ್ ವಿಲಾಸ್) ಅಭ್ಯರ್ಥಿ, ಇಪ್ಪತ್ತೈದು ವರ್ಷದ ಶಾಂಭವಿ ಚೌಧರಿ ಅವರು ಲೋಕಸಭೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ದೇಶದ ಅತ್ಯಂತ ಕಿರಿಯ ದಲಿತ ಮಹಿಳಾ ಸಂಸದೆಯಾಗಿ ಹೊರಹೊಮ್ಮುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಶಾಂಭವಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಜೆಡಿಯು ಸಚಿವ ಮಹೇಶ್ವರ್ ಹಜಾರಿಯವರ ಪುತ್ರ ಸನ್ನಿ ಹಜಾರಿ ಅವರನ್ನು 1.87 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತ ಎಂದು ಪರಿಗಣಿಸಲ್ಪಟ್ಟಿರುವ ಜೆಡಿಯುನ ಹಿರಿಯ ಸಚಿವ ಅಶೋಕ್ ಚೌಧರಿ ಅವರ ಪುತ್ರಿ ಶಾಂಭವಿ ಅವರು ರಾಜ್ಯದ ಈ ಮೀಸಲು ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅತಿ ಕಿರಿಯ ಮಹಿಳಾ ಅಭ್ಯರ್ಥಿಯಾಗಿದ್ದರು.
ಮಾಜಿ ಐಪಿಎಸ್ ಅಧಿಕಾರಿ ಆಚಾರ್ಯ ಕಿಶೋರ್ ಕುನಾಲ್ ಅವರ ಸೊಸೆಯಾಗಿರುವ ಶಾಂಭವಿ ಅವರು, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪಿಜಿ ಮಾಡಿದ್ದು, ಮಗಧ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.