ಲಖನೌ:
ಹಿಂದೂ ಧರ್ಮ ಕೇವಲ ‘ಭ್ರಮೆ’ ಮತ್ತು ಸಮಾಜದಲ್ಲಿನ ಎಲ್ಲಾ ಅಸಮಾನತೆಗಳಿಗೆ ಬ್ರಾಹ್ಮಣತ್ವವೇ ಕಾರಣ ಎಂದು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ಸೋಮವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೌರ್ಯ ಅವರು ಹಿಂದೂ ಮಹಾಕಾವ್ಯ ರಾಮಚರಿತ ಮಾನಸ ನ ಕೆಲವು ಪದ್ಯಗಳು ಜಾತಿಯ ಆಧಾರದ ಮೇಲೆ ಸಮಾಜದ ದೊಡ್ಡ ವರ್ಗವನ್ನು ಅವಮಾನಿಸುತ್ತವೆ ಮತ್ತು ಇವುಗಳನ್ನು ‘ನಿಷೇಧಿಸಬೇಕು’ ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದರು.
ಇಂದು ಮತ್ತೊಂದು ವಿವಾದಾತ್ಮಕ ಟ್ವೀಟ್ ಮಾಡಿರುವ ಎಸ್ ಪಿ ನಾಯಕ, ‘ಬ್ರಾಹ್ಮಣವಾದದ ಬೇರುಗಳು ತುಂಬಾ ಆಳವಾಗಿವೆ ಮತ್ತು ಎಲ್ಲಾ ಅಸಮಾನತೆಗೆ ಬ್ರಾಹ್ಮಣತ್ವವೇ ಕಾರಣ’ ಎಂದು ಟೀಕಿಸಿದ್ದಾರೆ.
‘ಹಿಂದೂ ಧರ್ಮ ಅಂತ ಯಾವುದೇ ಧರ್ಮ ಇಲ್ಲ, ಹಿಂದೂ ಧರ್ಮ ಕೇವಲ ಭ್ರಮೆ. ನಿಜವಾದ ಅರ್ಥದಲ್ಲಿ ಬ್ರಾಹ್ಮಣ ಧರ್ಮವನ್ನು ಹಿಂದೂ ಧರ್ಮ ಎಂದು ಕರೆದು ಈ ದೇಶದ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದವರನ್ನು ಅವರ ಧರ್ಮದ ಜಾಲದಲ್ಲಿ ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಹಿಂದೂ ಧರ್ಮ ಇದ್ದಿದ್ದರೆ ಆದಿವಾಸಿಗಳನ್ನು ಗೌರವಿಸುತ್ತಿದ್ದರು, ದಲಿತರನ್ನು ಗೌರವಿಸುತ್ತಿದ್ದರು, ಹಿಂದುಳಿದವರನ್ನು ಗೌರವಿಸುತ್ತಿದ್ದರು, ಮಹಿಳೆಯರನ್ನು ಗೌರವಿಸುತ್ತಿದ್ದರು. ಆದರೆ ಎಂತಹ ವಿಪರ್ಯಾಸ ನೋಡಿ ಎಂದು ಸಮಾಜವಾದಿ ನಾಯಕ ಟ್ವೀಟ್ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
