ಗುವಾಹಟಿ:
ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರನಿರ್ಮಾಪಕ ಲೂಯಿತ್ ಕುಮಾರ್ ಬರ್ಮನ್ ಅವರು ಮಹಾತ್ಮ ಗಾಂಧಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಮೋದಿ ಅವರು ರಾಷ್ಟ್ರಪಿತನ ಬಗ್ಗೆ ಅತ್ಯಂತ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬರ್ಮನ್ ಅವರು ಬುಧವಾರ ರಾತ್ರಿ ಗುವಾಹಟಿಯ ಹಟಿಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಾಥಮಿಕ ತನಿಖೆ ನಡೆಯುತ್ತಿದ್ದು, ಈ ಸಂಬಂಧ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಟಿವಿ ಚಾನೆಲ್‌ಗೆ ನೀಡಿದ ಟಿವಿ ಸಂದರ್ಶನದಲ್ಲಿ ಪ್ರಧಾನಿ ಮೋದಿ, “… ” ಗಾಂಧೀಜಿ ಅವರನ್ನು ಕಾಂಗ್ರೆಸ್ ಹೆಚ್ಚು ಜನಪ್ರಿಯಗೊಳಿಸಲೇ ಇಲ್ಲ. ಸಿನಿಮಾ ಬಿಡುಗಡೆ ಆದಮೇಲೆಯೇ ಜಗತ್ತಿಗೆ ಗಾಂಧಿ ಅವರ ಬಗ್ಗೆ ತಿಳಿಯಿತು. 75 ವರ್ಷಗಳಲ್ಲಿ ಗಾಂಧಿ ಅವರನ್ನು ಜಗತ್ತಿಗೆ ಪರಿಚಯಿಸುವ ಜವಾಬ್ದಾರಿ ನಮ್ಮದಾಗಿರಲಿಲ್ಲವೇ? ಸಿನಿಮಾ ಬಿಡುಗಡೆ ಆದ ಮೇಲೆಯೇ ಗಾಂಧಿ ಅವರ ಬಗ್ಗೆ ಕುತೂಹಲ ಹೆಚ್ಚಾಯಿತು” ಎಂದಿದ್ದಾರೆ.
ಪ್ರಧಾನಿ ಮೋದಿ ಅವರ ಈ ಹೇಳಿಕೆಗೆ ಕಾಂಗ್ರೆಸ್ ಸೇರಿದಂತೆ ಅನೇಕರಿಂದ ಭಾರಿ ಆಕ್ಷೇಪ ವ್ಯಕ್ತವಾಗಿದೆ. ಹಲವು ನಾಯಕರು ಪ್ರಧಾನಿ ಮೋದಿಯ ಶಿಕ್ಷಣದ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಈಗ ಅವರ ವಿರುದ್ಧ ದೂರು ದಾಖಲಾಗಿದೆ.
ಬರ್ಮನ್ ಅವರು ತಮ್ಮ ದೂರಿನಲ್ಲಿ, “ಇದು ಅತ್ಯಂತ ಅವಹೇಳನಕಾರಿ ಹೇಳಿಕೆಯಾಗಿದೆ ಮತ್ತು ಭಾರತೀಯರು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಒಬ್ಬ ನಾಗರಿಕನಾಗಿ ನಾವು ಮಹಾತ್ಮ ಗಾಂಧಿಯವರಿಗೆ ಅವಮಾನ ಮಾಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.ಅವರನ್ನು ಜಗತ್ತಿಗೆ ಪರಿಚಯಿಸಲು ಯಾವುದೇ ಚಲನಚಿತ್ರದ ಅಗತ್ಯವಿಲ್ಲ ಎಂದು ಬರ್ಮನ್ ಹೇಳಿದ್ದಾರೆ.