ನಾಗ್ಪುರ:
ಔರಂಗಜೇಬ್ ಸಮಾಧಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಭುಗಿಲೆದ್ದ ಕೋಮು ಗಲಭೆಗೆ ಕುಮ್ಮಕ್ಕು ನೀಡಿದ ಸಂಚುಕೋರನ ಫೊಟೋವನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ. ಮಾರ್ಚ್ 17 ರಂದು (ಸೋಮವಾರ) ನಗರದಲ್ಲಿ ನಡೆದ ಕೋಮು ಘರ್ಷಣೆಯ ಹಿಂದಿನ ಸೂತ್ರಧಾರಿ ಫಾಹೀಮ್ ಶಮೀಮ್ ಖಾನ್ ಅವರ ಮೊದಲ ಚಿತ್ರವನ್ನು ನಾಗ್ಪುರ ಪೊಲೀಸರು ಬುಧವಾರ ಬಿಡುಗಡೆ ಮಾಡಿದ್ದು, ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ಘರ್ಷಣೆಗಳು ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು ಫಾಹೀಮ್ ಖಾನ್ ಪ್ರಚೋದನಕಾರಿ ಭಾಷಣ ಮಾಡಿದ್ದ ಎನ್ನಲಾಗಿದೆ. ಆತನ ಭಾಷಣ ನಾಗ್ಪುರದ ಅಲ್ಲಲ್ಲಿ ಕೋಮು ಉದ್ವಿಗ್ನತೆ, ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಫಹೀಮ್ ಖಾನ್ 2024 ರ ಲೋಕಸಭಾ ಚುನಾವಣೆಯಲ್ಲಿ ನಾಗ್ಪುರ ಕ್ಷೇತ್ರದಿಂದ ಅಲ್ಪಸಂಖ್ಯಾತರ ಪ್ರಜಾಸತ್ತಾತ್ಮಕ ಪಕ್ಷವನ್ನು ಪ್ರತಿನಿಧಿಸಿ ಸ್ಪರ್ಧಿಸಿದ್ದ. ಆತ ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಕಣಕ್ಕಿಳಿದಿದ್ದ. ಆದರೆ 6.5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದ. 38 ವರ್ಷದ ಫಾಹೀಮ್ ಖಾನ್ ಎಂಡಿಪಿಯ ನಗರ ಅಧ್ಯಕ್ಷನಾಗಿದ್ದು, ನಾಗ್ಪುರದ ಯಶೋಧರ ನಗರದ ಸಂಜಯ್ ಬಾಗ್ ಕಾಲೋನಿಯ ನಿವಾಸಿ. ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ಎಫ್‌ಐಆರ್‌ನಲ್ಲಿ ಅವರ ಹೆಸರನ್ನು ಅಧಿಕೃತವಾಗಿ ಸೇರಿಸಲಾಗಿದೆ.
ಇನ್ನು ಹಿಂಸಾಚಾರಕ್ಕೆ ಇತ್ತೀಚೆಗೆ ಬಿಡುಗಡೆಗೊಂಡ ವಿಕ್ಕಿ ಕೌಶಲ್ ಅಭಿನಯದ ಛಾವಾ ಚಿತ್ರವು ಒಂದು ರೀತಿಯಲ್ಲಿ ಕಾರಣವಾಗಿದೆ. ಇದರಿಂದಾಗಿ ಔರಂಗಜೇಬ್ ವಿರುದ್ಧ ಜನರ ಕೋಪ ಮತ್ತಷ್ಟು ಹೆಚ್ಚಿಸಿತ್ತು ಎಂದು ಮಹಾರಾಷ್ಟ್ರ ಸಿಎಂ ಫಡ್ನವೀಸ್ ಹೇಳಿದ್ದರು. ಅಲ್ಲದೇ ಜನರು ಶಾಂತಿಯನ್ನು ಕಾಪಾಡಿಕೊಳ್ಳಲು ಮನವಿ ಮಾಡಿದ್ದಾರೆ. ಛಾವಾ ಚಿತ್ರವು ಔರಂಗಜೇಬ್ ವಿರುದ್ಧ ಜನರ ಕೋಪಕ್ಕೆ ಮತ್ತಷ್ಟು ಕಿಚ್ಚು ಹಚ್ಚಿತ್ತು. ಎಲ್ಲರೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು. ಯಾರಾದರೂ ಗಲಭೆ ಮಾಡಿದರೆ, ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಮಹಾರಾಷ್ಟ್ರ ಸಿಎಂ ಎಚ್ಚರಿಸಿದ್ದಾರೆ.
ಸಂಭಾಜಿ ನಗರದ ಔರಂಗಜೇಬ್ ಸಮಾಧಿಯ ಕುರಿತು ಭಾರಿ ವಿವಾದ ಉಂಟಾಗಿದ್ದು, ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಂತಹ ಹಿಂದೂ ಸಂಘಟನೆಗಳು ಅದನ್ನು ಕೆಡವಲು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಈ ಘರ್ಷಣೆಗಳು ನಡೆದಿವೆ. ಘರ್ಷಣೆಗಳು ಭುಗಿಲೆದ್ದ ಗಂಟೆಗಳ ಮೊದಲು, ಸೋಮವಾರ ಬೆಳಿಗ್ಗೆ ನಾಗ್ಪುರದಲ್ಲಿ ಎರಡೂ ಗುಂಪುಗಳು ಪ್ರತಿಭಟನೆಗಳನ್ನು ನಡೆಸಿದ್ದವು.
