ನವದೆಹಲಿ:
ದೆಹಲಿಯಲ್ಲಿ 27 ವರ್ಷಗಳ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೆ ಅಧಿಕಾರಕ್ಕೆ ಬಂದಿದ್ದು, ಗುರುವಾರ ರಾಮಲೀಲಾ ಮೈದಾನದಲ್ಲಿ ಇಂದು ಮಧ್ಯಾಹ್ನ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ರೇಖಾ ಗುಪ್ತಾ ಮುಖ್ಯಮಂತ್ರಿ ಮತ್ತು ಆರು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬುಧವಾರ ಸಂಜೆ ನಡೆದ ಬಿಜೆಪಿ ಶಾಸಕರ ನಿರ್ಣಾಯಕ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾದ ನಂತರ ಅವರು ಮುಂದಿನ ಸರ್ಕಾರ ರಚಿಸುವ ಹಕ್ಕು ಮಂಡಿಸಿದರು. ಇನ್ನು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿರುವ ಸ್ಥಳ ಮತ್ತು ಸುತ್ತಮುತ್ತ 25,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಈ ಮೆಗಾ ಕಾರ್ಯಕ್ರಮದಲ್ಲಿ 20 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು, ದೆಹಲಿ ಚುನಾವಣೆಯಲ್ಲಿ ಪ್ರಚಾರ ಮಾಡಿದ ಇತರ ರಾಜ್ಯಗಳ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ. 50 ಕ್ಕೂ ಹೆಚ್ಚು ಚಲನಚಿತ್ರ ತಾರೆಯರು ಮತ್ತು ಕೈಗಾರಿಕೋದ್ಯಮಿಗಳು ಭಾಗವಹಿಸಲಿದ್ದಾರೆ. ಪ್ರಮಾಣವಚನ ಸಮಾರಂಭಕ್ಕೆ ಮುಂಚಿತವಾಗಿ ವರ್ಣರಂಜಿತ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಕೈಲಾಶ್ ಖೇರ್ ಪ್ರದರ್ಶನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಮುಖ ದೇಶಗಳ ರಾಜತಾಂತ್ರಿಕರನ್ನೂ ಸಹ ಆಹ್ವಾನಿಸಲಾಗಿದೆ. ದೇಶದ ಆಧ್ಯಾತ್ಮಿಕ ನಾಯಕರನ್ನು ಬಾಬಾ ರಾಮದೇವ್, ಸ್ವಾಮಿ ಚಿದಾನಂದ, ಬಾಬಾ ಬಾಗೇಶ್ವರ ಧೀರೇಂದ್ರ ಶಾಸ್ತ್ರಿ ಮತ್ತು ಇತರ ಧಾರ್ಮಿಕ ವ್ಯಕ್ತಿಗಳು ಪ್ರತಿನಿಧಿಸಲಿದ್ದಾರೆ.
ಇಂದು ರೇಖಾ ಗುಪ್ತಾ ಅವರ ಜೊತೆ ಮಂಜಿಂದರ್ ಸಿರ್ಸಾ, ಆಶಿಶ್ ಸೂದ್, ಪಂಕಜ್ ಕುಮಾರ್ ಸಿಂಗ್, ರವೀಂದರ್ ಇಂದ್ರಜ್ ಸಿಂಗ್, ಕಪಿಲ್ ಮಿಶ್ರಾ ಮತ್ತು ಪರ್ವೇಶ್ ವರ್ಮಾ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಾಮಾನ್ಯ ಜನರಲ್ಲಿ ದೆಹಲಿಯ ರೈತರು ಮತ್ತು ಲಾಡ್ಲಿ ಬೆಹೆನ್ ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು ಇರುತ್ತಾರೆ ಮತ್ತು ಸಾಮಾನ್ಯ ಜನರನ್ನು ಸಹ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ದೆಹಲಿ ಚುನಾವಣಾ ಫಲಿತಾಂಶಗಳು ಘೋಷಣೆಯಾದ 11 ದಿನಗಳ ನಂತರ ಬಿಜೆಪಿ ಶಾಲಿಮಾರ್ ಬಾಗ್ನಿಂದ ಮೊದಲ ಬಾರಿಗೆ ಶಾಸಕಿಯಾಗಿರುವ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡಿದೆ. ಬುಧವಾರ ಸಂಜೆ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಯಿತು.
ಬಿಜೆಪಿ ಸರ್ಕಾರದ ಮುಂದಿರುವ ಸವಾಲುಗಳೇನು?
ಭರವಸೆಗಳ ಈಡೇರಿಕೆ:
ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುವುದೇ ಬಿಜೆಪಿ ಸರ್ಕಾರದ ಮುಂದಿರುವ ಪ್ರಮುಖ ಸವಾಲು. ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾ. 8ರೊಳಗೆ ಅರ್ಹ ಮಹಿಳಾ ಫಲಾನುಭವಿಗಳಿಗೆ 2,500 ರೂ.ಗಳ ಆರ್ಥಿಕ ನೆರವು ನೀಡುವುದು ಬಿಜೆಪಿಯ ಚುನಾವಣಾ ಪ್ರಚಾರದ ಪ್ರಮುಖ ಭರವಸೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ರ್ಯಾಲಿಗಳಲ್ಲಿ ಈ ಭರವಸೆ ನೀಡಿದ್ದರು. ಇದನ್ನು ತಕ್ಷಣವೇ ಜಾರಿಗೊಳಿಸಬೇಕಾದ ಅನಿವಾರ್ಯತೆ ಇದೆ.
ವಾಯು ಮಾಲಿನ್ಯ ಬಿಕ್ಕಟ್ಟು:
ತೀರಾ ಹದಗೆಟ್ಟು ಅಪಾಯಕಾರಿಯಾಗಿ ದಿಲ್ಲಿಯ ಗಾಳಿಯ ಗುಣಮಟ್ಟ ಕುಸಿದಿದ್ದು, ಇದನ್ನು ಸರಿಪಡಿಸುವ ಗುರುತರ ಜವಾಬ್ದಾರಿ ಹೊಸ ಸರ್ಕಾರದ ಮೇಲಿದೆ. ವಿಶೇಷವಾಗಿ ಚಳಿಗಾಲದಲ್ಲಿ ಕಸ ಸುಡುವುಡು, ವಾಹನಗಳ ಸಂಖ್ಯೆ ಹೆಚ್ಚಳ ಮತ್ತು ಕೈಗಾರಿಕಾ ಮಾಲಿನ್ಯ ಪರಿಸ್ಥಿತಿಯನ್ನು ಗಂಭೀರವಾಗಿಸಿದೆ. ಗಿಡ ನೆಡುವುದು, ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವುದು ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವುದು ಸೇರಿದಂತೆ ಸುಸ್ಥಿರ ಪರಿಹಾರಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಬೇಕಿದೆ.
ನೀರು ಮತ್ತು ವಿದ್ಯುತ್ ಸರಬರಾಜು:
ನೀರಿನ ಕೊರತೆ ಮತ್ತು ಅನೇಕ ಪ್ರದೇಶಗಳಲ್ಲಿ ಅನಿಯಮಿತ ಪೂರೈಕೆಯಿಂದ ದಿಲ್ಲಿ ಸಮಸ್ಯೆ ಎದುರಿಸುತ್ತಿದೆ. ಯಮುನಾ ನದಿಯ ಮಾಲಿನ್ಯದಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ವಿಧಾನಸಭಾ ಚುನಾವಣೆಗೆ ಮೊದಲು ಬಿಜೆಪಿ ನೀಡಿದ ಭರವಸೆಗಳ ಪಟ್ಟಿಯಲ್ಲಿ ಶುದ್ಧ ಕುಡಿಯುವ ನೀರು ಮತ್ತು ನಿರಂತರ ವಿದ್ಯುತ್ ಸರಬರಾಜು ಕೂಡ ಸೇರಿದೆ.
ಕಾನೂನು ಮತ್ತು ಸುವ್ಯವಸ್ಥೆ:
ಮಹಿಳೆಯರ ಸುರಕ್ಷತೆ ಮತ್ತು ಹೆಚ್ಚುತ್ತಿರುವ ಅಪರಾಧಗಳು ಕೂಡ ಹೊಸ ಸರ್ಕಾರಕ್ಕೆ ಕಠಿಣ ಸವಾಲು ತಂದೊಡ್ಡಲಿದೆ. ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ದಿಲ್ಲಿ ಪೊಲೀಸರೊಂದಿಗೆ ಸಮನ್ವಯವನ್ನು ಸುಧಾರಿಸುವುದು ಕೂಡ ತುರ್ತು ಅಗತ್ಯ.
ಕಲ್ಯಾಣ ಯೋಜನೆಗಳ ಜಾರಿ:
ಕಳೆದ 2 ಚುನಾವಣೆಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಅಧಿಕಾರಕ್ಕೆ ಏರಲು ಉಚಿತ ನೀರು, ವಿದ್ಯುತ್ ಮತ್ತು ಸರ್ಕಾರಿ ಶಾಲೆಗಳಲ್ಲಿ ಸುಧಾರಿತ ಶಿಕ್ಷಣ ಸೇರಿದಂತೆ ಹಲವು ಕಲ್ಯಾಣ ಯೋಜನೆಗಳು ಕಾರಣವಾಗಿದ್ದವು. ಈ ಬಾರಿ ಬಿಜೆಪಿ ತನ್ನ ಸಂಕಲ್ಪ ಪತ್ರದಲ್ಲಿ (ಪ್ರಣಾಳಿಕೆ) ಇದೇ ರೀತಿಯ ಕಲ್ಯಾಣ ಯೋಜನೆಗಳನ್ನು ಘೋಷಿಸಿರುವುದರಿಂದ ಇದರ ಅನುಷ್ಠಾನವನ್ನು ಯಾವ ರೀತಿ ಜಾರಿಗೊಳಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
