ವೈದ್ಯರಲ್ಲಿ ವೈದ್ಯರಾದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು :  

      ಸ್ವತಃ ವೈದ್ಯರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ವೈದ್ಯರ ದಿನಾಚರಣೆ ನಿಮಿತ್ತ ವೈದ್ಯರಲ್ಲಿ ವೈದ್ಯರಾಗಿಯೇ ಶುಭ ಕೋರಿ ಸಂಭ್ರಮಿಸಿದ ಪ್ರಸಂಗ ನಗರದ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ನಡೆಯಿತು.

      ಬೆಳಗ್ಗೆಯೇ ಆಸ್ಪತ್ರೆಗೆ ಧಾವಿಸಿದ ಡಿಸಿಎಂ ಅವರು, ವೈದ್ಯರಿಗೆ ಹೂಗುಚ್ಛ- ಸಿಹಿ  ನೀಡಿ ಶುಭಾಶಯ ಕೋರಿದರಲ್ಲದೆ, ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಅವರ ಕಷ್ಟ-ಸುಖಗಳನ್ನು ಆಲಿಸಿದರು.

      ಯಾವುದೇ ಶಿಷ್ಟಾಚಾರಕ್ಕೆ ಅವಕಾಶವಿಲ್ಲದೆ, ಉಪ ಮುಖ್ಯಮಂತ್ರಿ ಎಂಬ ಸಂಗತಿಯನ್ನು ಬದಿಗಿಟ್ಟು ವೈದ್ಯರೊಂದಿಗೆ ಮುಕ್ತವಾಗಿ ಬೆರೆತ ಅವರು, ಪ್ರತಿಯೊಬ್ಬರನ್ನೂ ಮಾತನಾಡಿಸಿ ಆತ್ಮೀಯತೆಯಿಂದ ಅವರ ವಿಚಾರಗಳನ್ನು, ಮನವಿಗಳನ್ನು ಕೇಳಿಸಿಕೊಂಡರು. ಸಿಬ್ಬಂದಿ ಮತ್ತು ವೈದ್ಯರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

      ಡಿಸಿಎಂ ಆಗಮನದಿಂದ ಪುಳಕಿತರಾದ ಎಲ್ಲ ವೈದ್ಯರು, ಅವರ ಜತೆ ಸೆಲ್ಫಿ ತೆಗೆದುಕೊಂಡರಲ್ಲದೆ ಉಪ ಮುಖ್ಯಮಂತ್ರಿಗಳೇ ಸ್ವತಃ ಆಸ್ಪತ್ರೆಗೆ ಬಂದು ಡಾಕ್ಟರ್ಸ್‌ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಂತಸ ಉಂಟು ಮಾಡಿದೆ. ಇದು ನಮ್ಮ ಜೀವಮಾನದಲ್ಲೇ ಆವಿಸ್ಮರಣಿಯ ಘಟನೆ ಎಂದು ಕೆಲ ವೈದ್ಯರು ಅಭಿಪ್ರಾಯ ಹಂಚಿಕೊಂಡರು.

ನಾನೂ ವೈದ್ಯ ಎಂದು ಹೇಳಲು ಹೆಮ್ಮೆ ಇದೆ: ಡಿಸಿಎಂ

      ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ; “ನಾನು ವೈದ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಅದರಲ್ಲೂ ಇಷ್ಟು ಜನ ವೈದ್ಯರ ಜತೆ ನಾನೂ ವೈದ್ಯನಾಗಿ ಇರುವುದು ನನ್ನ ಸಂತೋಷವನ್ನು ಹೆಚ್ಚಿಸಿದೆ” ಎಂದು ಭಾವುಕರಾಗಿ ಹೇಳಿದರು.

     ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ವೈದ್ಯರು ಒತ್ತಡದಲ್ಲಿದ್ದಾರೆಂಬುದು ನಿಜ. ಹಗಲಿರುಳೆನ್ನದೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಸೋಂಕಿಗೆ ಎದೆಯೊಡ್ಡಿ ಪ್ರಾಣಗಳನ್ನು ಕಾಪಾಡುತ್ತಿದ್ದಾರೆ. “ವೈದ್ಯೋ ನಾರಾಯಣ ಹರಿ” ಎಂಬ ಮಾತು ಸಾಕ್ಷಾತ್ಕಾರವಾಗಿದೆ ಎಂದು ಅವರು ನುಡಿದರು.

ಆರೋಗ್ಯ ಇಲಾಖೆಗೆ 1,500 ಕೋಟಿ ರೂ.

      ವೈದ್ಯರು ಮತ್ತು ಜನರಿಗೆ ಅನುಕೂಲವಾಗುವಂತೆ ರಾಜ್ಯದ ಆರೋಗ್ಯ ಮೂಲಸೌಕರ್ಯಗಳನ್ನು ಆಮೂಲಾಗ್ರವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಹೆಚ್ಚುವರಿಯಾಗಿ ಸುಮಾರು 1,500 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಿಂದ ಮೊದಲುಗೊಂಡು ತಾಲೂಕು-ಜಿಲ್ಲಾಸ್ಪತ್ರೆಗಳ ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

      ತಂತ್ರಜ್ಞಾನ ಅಭಿವೃದ್ಧಿ, ಮೂಲಸೌಕರ್ಯ, ವೈದ್ಯರು ಮತ್ತು ಸಿಬ್ಬಂದಿ ನೇಮಕ ಮತ್ತಿತರೆ ಉದ್ದೇಶಕ್ಕಾಗಿ ಈ ಮೊತ್ತವನ್ನು ವಿನಿಯೋಗ ಮಾಡಲಾಗುತ್ತಿದೆ. ಪ್ರತೀ ತಾಲೂಕು ಆಸ್ಪತ್ರೆಯ್ಲಿ ಕೊನೆಪಕ್ಷ 25 ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

      ಇದರ ಜತೆಗೆ ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ 100 ಹಾಸಿಗೆಗಳ ಆಸ್ಪತ್ರೆಯನ್ನು ಹಾಗೂ ಪ್ರತೀ ನಾಲ್ಕು ಕ್ಷೇತ್ರಗಳಿಗೊಂದು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು. ಎಲ್ಲರಿಗೂ ಸುಲಭವಾಗಿ, ಕಡಿಮೆ ದರದಲ್ಲಿ ಆರೋಗ್ಯ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಂಡಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

ಆಪರೇಷನ್‌ ಆಕ್ಸಿಜನ್; ಡಿಸಿಎಂ ಕೃತಜ್ಞತೆ

      ಕಳೆದ ಮೇ 5ರಂದು ರಾತ್ರಿ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆ ಉಂಟಾದಾಗ ಇಡೀ ರಾತ್ರಿ ಇಡೀ ವೈದ್ಯರ ತಂಡ, ಸಿಬ್ಬಂದಿ ಸೋಂಕಿತರ ಕಾಳಜಿ ವಹಿಸಿದ್ದ ಘಟನೆಯನ್ನು ಸ್ಮರಿಸಿದ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು, ಅಂದು ಕರ್ತವ್ಯದಲ್ಲಿದ್ದು ಸೋಂಕಿತರ ಪ್ರಾಣ ರಕ್ಷಣೆ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

     ಡಾ.ಮೋಹನ್ ಅವರ ನೇತೃತ್ವದಲ್ಲಿ ಎಲ್ಲ ಸಿಬ್ಬಂದಿ, ವೈದ್ಯರು ಅತ್ಯುತ್ತಮವಾಗಿ ಕೆಲಸ ಮಾಡಿದರು. ಸ್ವಲ್ಪ ಎಚ್ಚರ ತಪ್ಪಿದ್ದಿದ್ದರೆ ದೊಡ್ಡ ಅನಾಹುತ ಆಗುತ್ತಿತ್ತು. ಇಡೀ ರಾತ್ರಿ ಸ್ವಲ್ಪವೂ ಎಚ್ಚರ ತಪ್ಪದೇ ಕೆಲಸ ಮಾಡಿದ ಎಲ್ಲರಿಗೂ ಸರಕಾರ ಋಣಿಯಾಗಿದೆ ಎಂದರು ಡಿಸಿಎಂ
   
      ಈ ಸಂದರ್ಭದಲ್ಲಿ ಕೆ.ಸಿ ಜನರಲ್‌ ಆಸ್ಪತ್ರೆ ಅಧೀಕ್ಷಕ ಡಾ.ವೆಂಕಟೇಶಯ್ಯ, ಡಾ. ಮೋಹನ್‌ ಸೇರಿದಂತೆ ಎಲ್ಲ ವೈದ್ಯರು, ಸಿಬ್ಬಂದಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link