ಕೀನ್ಯಾ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ದೊಡ್ಡ ಗಣೇಶ್ ನೇಮಕ

ನವದೆಹಲಿ :

    ಟೀಮ್ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ದೊಡ್ಡ ಗಣೇಶ್ ಅವರು ಕೀನ್ಯಾ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. 2012-13 ರಲ್ಲಿ ಗೋವಾ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಕರ್ನಾಟಕ ವೇಗಿ ಇದೀಗ ರಾಷ್ಟ್ರೀಯ ತಂಡದ ಪರ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ದೊಡ್ಡ ಗಣೇಶ್ ಅವರ ನೇತೃತ್ವದಲ್ಲಿ ಕೀನ್ಯಾ ತಂಡವು ಮುಂಬರುವ ಐಸಿಸಿ ಡಿವಿಷನ್ 2 ಚಾಲೆಂಜ್ ಲೀಗ್​​ನಲ್ಲಿ ಕಣಕ್ಕಿಳಿಯಲಿದೆ. ಈ ಲೀಗ್​ನಲ್ಲಿ ಕೀನ್ಯಾ ತಂಡದ ಎದುರಾಳಿಗಳಾಗಿ ಪಪುವಾ ನ್ಯೂಗಿನಿಯಾ, ಕತಾರ್, ಡೆನ್ಮಾರ್ಕ್ ಮತ್ತು ಜರ್ಸಿ ತಂಡಗಳು ಕಾಣಿಸಿಕೊಳ್ಳಲಿದೆ.

    ಅಕ್ಟೋಬರ್ ತಿಂಗಳಲ್ಲಿ ಟಿ20 ವಿಶ್ವಕಪ್ ಆಫ್ರಿಕಾ ವಿಭಾಗದ ಅರ್ಹತಾ ಸುತ್ತು ನಡೆಯಲಿದ್ದು, ಈ ಸುತ್ತಿನಲ್ಲಿ ಕೀನ್ಯಾ ತಂಡ ಕಾಣಿಸಿಕೊಳ್ಳಲಿದೆ. ಹೀಗಾಗಿ ಒಂದು ಕಾಲದ ಬಲಿಷ್ಠ ತಂಡ ಎನಿಸಿಕೊಂಡಿದ್ದ ಕೀನ್ಯಾ ತಂಡವನ್ನು ಮತ್ತೆ ಮುನ್ನಲೆಗೆ ತರುವ ಮಹತ್ವದ ಜವಾಬ್ದಾರಿ ದೊಡ್ಡ ಗಣೇಶ್ ಅವರ ಮುಂದಿದೆ. 

   1990-2000 ರಲ್ಲಿ ದೇಶೀಯ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದ ದೊಡ್ಡ ಗಣೇಶ್ ಟೀಮ್ ಇಂಡಿಯಾ ಪರ ಒಟ್ಟು 5 ಪಂದ್ಯಗಳನ್ನಾಡಿದ್ದಾರೆ. ಭಾರತದ ಪರ 4 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕರ್ನಾಟಕ ವೇಗಿ 5 ವಿಕೆಟ್ ಕಬಳಿಸಿದ್ದರು. ಹಾಗೆಯೇ 1997 ರಲ್ಲಿ ನಡೆದ ಝಿಂಬಾಬ್ವೆ ವಿರುದ್ಧ ಏಕೈಕ ಏಕದಿನ ಪಂದ್ಯವಾಡಿದ್ದ ದೊಡ್ಡ ಗಣೇಶ್ ಅವರು ಒಂದು ವಿಕೆಟ್ ಪಡೆದಿದ್ದರು.

   ವಿಶೇಷ ಎಂದರೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ದೊಡ್ಡ ಗಣೇಶ್ 6 ಬಾರಿ 10 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 20 ಬಾರಿ 5+ ವಿಕೆಟ್ ಉರುಳಿಸಿ ಕರ್ನಾಟಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ಕೀನ್ಯಾ ತಂಡದ ನೂತನ ಕೋಚ್ ಆಗಿ ದೊಡ್ಡ ಗಣೇಶ್ ಅವರು ಹೊಸ ಇನಿಂಗ್ಸ್ ಆರಂಭಿಸುತ್ತಿರುವುದು ವಿಶೇಷ.

Recent Articles

spot_img

Related Stories

Share via
Copy link