ಅಪಾಯಕಾರಿ ಶ್ವಾನ ತಳಿ ಬ್ರೀಡಿಂಗ್‌ : ಕೇಂದ್ರದ ಆದೇಶಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು:

    ಶ್ವಾನಗಳಲ್ಲಿಯೇ ಅತ್ಯಂತ ಅಪಾಯಕಾರಿ ಮತ್ತು ಕ್ರೂರವಾಗಿರುವ ತಳಿಗಳ ಸಂತಾನೋತ್ಪತ್ತಿಗೆ ನಿಷೇಧ ಹೇರಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಬೆಂಗಳೂರು ನಗರದಲ್ಲಿ ವಾಸವಿರುವ ಕಿಂಗ್​​ ಸೋಲ್ಮನ್​ ಡೇವಿಡ್​​ ಮತ್ತು ಮರ್ಡೋನಾ ಜಾನ್​ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

    ಕೇಂದ್ರ ಸರ್ಕಾರದ ವಾದ ಆಲಿಸಿದ ಪೀಠ, ದೆಹಲಿ ಹೈಕೋರ್ಟ್ ಆದೇಶದಲ್ಲಿ ಅಪಾಯಕಾರಿ ಶ್ವಾನಗಳ ತಳಿ ನಿಷೇಧಿಸುವ ಕುರಿತಂತೆ ಸಂಬಂಧಪಟ್ಟ ಎಲ್ಲ ಪಾಲುದಾರರೊಂದಿಗೆ ಚರ್ಚಿಸಬೇಕು ಎಂದು ತಿಳಿಸಿದೆ. ಅದರಂತೆ, ಅವುಗಳಲ್ಲಿ ಕೆನ್ನೆಲ್ ಕ್ಲಬ್ ಆಪ್ ಇಂಡಿಯಾ ಕೂಡಾ ಒಂದಾಗಿದ್ದು, ಅದರ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿಲ್ಲ. ಹೀಗಾಗಿ ಕೇಂದ್ರದ ಪರ ವಕೀಲರು ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸುವ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಪರಿಗಣಿಸಿರುವ ಎಲ್ಲ ಅಂಶಗಳಿರುವ ದಾಖಲೆಗಳನ್ನು ಸಲ್ಲಿಸಬೇಕು. ಅಲ್ಲಿಯವರೆಗೂ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗುವಂತೆ ಸುತ್ತೋಲೆಗೆ ತಡೆ ನೀಡುತ್ತಿರುವುದಾಗಿ ಕೋರ್ಟ್ ಆದೇಶಿಸಿದೆ.

   ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ಮನುಷ್ಯನ ಜೀವಕ್ಕೆ ಅಪಾಯಕಾರಿ ಮತ್ತು ಉಗ್ರವಾಗಿ ವರ್ತಿಸುವ ತಳಿಯ ಶ್ವಾನಗಳನ್ನು ಗುರುತಿಸುವುದಕ್ಕೆ ಆಳವಾದ ಅಧ್ಯಯನದ ಅಗತ್ಯವಿದೆ. ಆದರೆ, ಸುತ್ತೋಲೆಯಲ್ಲಿ ಉಲ್ಲೇಖಿಸದ ಹಲವು ತಳಿಗಳು ಕ್ರೂರ ವರ್ಗಕ್ಕೆ ಸೇರಲಿವೆ ಎಂದ ಪೀಠಕ್ಕೆ ವಿವರಿಸಿದರು.

   ಕೇಂದ್ರ ಸರ್ಕಾರದ ವಾದ: ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸೇಟರ್ ಜನರಲ್, ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ದೆಹಲಿ ನ್ಯಾಯಾಲಯ ಈ ಸಂಬಂಧ ನಿರ್ದೇಶನ ನೀಡಿದೆ. ಅಲ್ಲದೆ, ಕೇಂದ್ರ ಸರ್ಕಾರ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಬೇಕು. ಅರ್ಜಿದಾರರ ಮನವಿಯನ್ನು ಪರಿಗಣಿಸಿ ಆದೇಶದ ಪ್ರತಿ ಲಭ್ಯವಾದ ಮೂರು ತಿಂಗಳೊಳಗೆ ಈ ಕುರಿತಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಿದರು.

   ಕ್ರೂರ ಹಾಗೂ ಅಪಾಯಕಾರಿ ಶ್ವಾನಗಳ ತಳಿಗಳ (ಅಮೆರಿಕನ್ ಸ್ಟಾಫರ್ಡ್ ಶೈರ್, ಟೆರಿಯರ್, ಡೋಗೋ ಅರ್ಜೆಂಟೇನೋ, ಬುಲ್ ಡಾಗ್, ಕಂಗಲ್, ಸೆಂಟ್ರಲ್ ಏಷ್ಯನ್ ಷಫರ್ಡ್ ಡಾಗ್ ಸೇರಿದಂತೆ ಮಿಶ್ರ ತಳಿಯ ಶ್ವಾನಗಳ) ಸಂತಾನೋತ್ಪತ್ತಿ ನಿಷೇಧಿಸುವ ಸಲುವಾಗಿ ಅವುಗಳ ಮಾಲೀಕರು ಸಂತಾನಹರಣಕ್ಕಾಗಿ ಅಗತ್ಯವಿರವ ಕ್ರ್ರಿಮಿನಾಶಕಗಳನ್ನು ಬಳಕೆ ಮಾಡಬೇಕು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ 2024ರ ಮಾರ್ಚ್ 12ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು 2024ರ ಏಪ್ರಿಲ್ 5ಕ್ಕೆ ಮುಂದೂಡಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap