ಬೀದಿನಾಯಿ ನಿಯಂತ್ರಿಸುವಲ್ಲಿ ಆಡಳಿತದ ವೈಫಲ್ಯ

ತುಮಕೂರು:

                  ಸಂತಾನ ಹರಣ ಶಸ್ತ್ರಚಿಕಿತ್ಸೆ ಎಂಬ ಘೋಷಣೆ: ಅದರಲ್ಲಿಯೂ ಗೋಲ್‍ಮಾಲ್

ವರ್ಷದಿಂದ ವರ್ಷಕ್ಕೆ ಬೀದಿನಾಯಿಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ನಗರ ಪ್ರದೇಶಗಳಲ್ಲಿ ಮಕ್ಕಳ ಮೇಲೆ, ದಾರಿಹೋಕರ ಮೇಲೆ ದಾಂಗುಡಿ ಇಡುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಕು ಪ್ರಾಣಿಗಳ ಮೇಲೆ ಎರಗುತ್ತಿವೆ. ನೂರಾರು ಕುರಿ, ಮೇಕೆ, ಕೋಳಿಗಳು ನಾಯಿಗಳ ಹಾವಳಿಗೆ ಬಲಿಯಾಗಿವೆ. ಹೀಗಿದ್ದೂ ಜಿಲ್ಲಾಡಳಿತ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳು ಮೂಕ ಪ್ರೇಕ್ಷಕರಾಗಿ ಕುಳಿತುಬಿಟ್ಟಿವೆ. ಕಣ್ಣಿದ್ದೂ ಕುರುಡರಂತಾಗಿರುವ ಅಧಿಕಾರಿಗಳ ಜಾಣ ನಡೆಯಿಂದಾಗಿ ಸಾರ್ವಜನಿಕರು ನಾಯಿಗಳ ಉಪಟಳ ಅನುಭವಿಸಬೇಕಾಗಿದೆ.

ಬೀದಿ ನಾಯಿಗಳ ಹರಣಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಇದನ್ನು ಯಾರೂ ಕೇಳುತ್ತಲೂ ಇಲ್ಲ. ನಾಯಿಗಳನ್ನು ನಿಯಂತ್ರಿಸಿ ಎಂಬುದಷ್ಟೇ ಸಾರ್ವಜನಿಕರ ಒಕ್ಕೊರಲ ಕೂಗು. ಕಾನೂನಿನ ಚೌಕಟ್ಟಿನಲ್ಲಿಯೆ ಬೀದಿ ನಾಯಿಗಳನ್ನು ನಿಯಂತ್ರಿಸಲು ಅವಕಾಶವಿದ್ದರೂ ಅದು ಬಳಕೆಯಾಗದೆ ಇರುವುದು ವಿಪರ್ಯಾಸ. ಸಂತಾನ ಹರಣ ಶಸ್ತ್ರಚಿಕಿತ್ಸೆಯ ಮೂಲಕ ನಾಯಿಗಳ ಸಂತತಿಗೆ ಕಾನೂನಾತ್ಮಕವಾಗಿಯೆ ಕಡಿವಾಣ ಹಾಕಲು ಅವಕಾಶವಿದ್ದರೂ ಅದರ ಬಳಕೆಯಾಗುತ್ತಿಲ್ಲ ಏಕೆ ಎಂಬುದು ಪ್ರಜ್ಞಾವಂತರ ಪ್ರಶ್ನೆ.

ಬೀದಿನಾಯಿಗಳ ಹಾವಳಿಗೆ ಸಂಬಂಧಿಸಿದಂತೆ ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಳೆದ 5-6 ವರ್ಷಗಳಿಂದ ಸಭೆಗಳಲ್ಲಿ ಚರ್ಚೆಯಾಗುತ್ತಲೆ ಇದೆ. ಕೆಲವು ನಿರ್ಣಯಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ. ಆದರೆ ಆ ತೀರ್ಮಾನಗಳು ಸಮರ್ಪಕವಾಗಿ ಜಾರಿಯಾಗುತ್ತಲೆ ಇಲ್ಲ.

2018 ರಲ್ಲಿ ಇದೇ ನಗರ ಪಾಲಿಕೆ ಒಂದು ಮಹತ್ವದ ತೀರ್ಮಾನ ಕೈಗೊಂಡಿತ್ತು. ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲು ಶಿರಾಗೇಟ್‍ನಲ್ಲಿ ಪಶು ಸಂಗೋಪನಾ ಇಲಾಖೆಯಿಂದ ನಿರ್ಮಾಣವಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲು ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆಗ ನಗರ ಪಾಲಿಕೆಯ ಅಧಿಕಾರಿಗಳೆ ನೀಡಿದ್ದ ಮಾಹಿತಿಯಂತೆ 1658 ಬೀದಿ ನಾಯಿಗಳ ಲೆಕ್ಕ ಸಿಕ್ಕಿತ್ತು. ಇದು ಅಧಿಕೃತ. ಲೆಕ್ಕ ಸಿಗದ ನಾಯಿಗಳು ಸೇರಿಕೊಂಡರೆ 2000 ದಾಟಬಹುದು. ಇದು 3 ವರ್ಷಗಳ ಹಿಂದಿನ ಲೆಕ್ಕಾಚಾರ. ನಾಯಿಗಳ ಸಂಖ್ಯೆ ಈಗ ದ್ವಿಗುಣವಾಗಿದ್ದು, ಎಲ್ಲ ವಾರ್ಡ್‍ಗಳಲ್ಲಿಯೂ ಕರಾರುವಕ್ಕಾಗಿ ಗಣತಿಯಾದರೆ ನಾಲ್ಕೈದು ಸಾವಿರ ಬೀದಿ ನಾಯಿಗಳ ಲೆಕ್ಕ ಸಿಗಬಹುದು ಅಥವಾ ಇದಕ್ಕೂ ಹೆಚ್ಚು ಇರಲು ಸಾಧ್ಯ.

ಪಾಲಿಕೆಯ ಸಭೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ಕೋಳಿ ಮತ್ತು ಮಾಂಸದ ಅಂಗಡಿಗಳ ತ್ಯಾಜ್ಯದ ಸಮರ್ಪಕ ವಿಲೇವಾರಿಯ ಬಗ್ಗೆ ಚರ್ಚೆಗಳು ನಡೆಯುತ್ತಲೆ ಬಂದಿವೆ. ಆದರೆ ಪರಿಣಾಮಕಾರಿ ಜಾರಿ ಅನುಷ್ಠಾನವಾಗುತ್ತಿಲ್ಲ. ಮಹಾನಗರ ಪಾಲಿಕೆಯ ಕರ್ತವ್ಯಲೋಪ ಇಲ್ಲಿ ಎದ್ದು ಕಾಣುತ್ತಿದೆ. ಈ ಕರ್ತವ್ಯಲೋಪ ಪ್ರಶ್ನಿಸುವ ಜಿಲ್ಲಾಡಳಿತ ಜಾಣಕುರುಡಾಗಿದೆ. ಇದರ ಫಲವನ್ನು ನಾಗರಿಕರು ಉಣ್ಣಬೇಕಾಗಿದೆ. ವಿಪರೀತವಾಗಿ ಹೆಚ್ಚಳವಾಗುತ್ತಿರುವ ನಾಯಿಗಳ ಹಾವಳಿಯಿಂದ ಜನತೆ ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿದ್ದಾರೆ.

ನಗರ ಮತ್ತು ಪಟ್ಟಣಗಳು ಬೆಳೆದಂತೆ ಮಾಂಸದ ಅಂಗಡಿಗಳು ಹೆಚ್ಚುತ್ತಿವೆ. ತುಮಕೂರು ನಗರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ, ಹೋಬಳಿ ಮಟ್ಟದಲ್ಲಿ ಕೋಳಿ ಅಂಗಡಿಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಅಲ್ಲಲ್ಲಿ ಮಟನ್ ಸ್ಟಾಲ್‍ಗಳು ತಲೆ ಎತ್ತುತ್ತಿವೆ. ಮಾಂಸದ ಅಂಗಡಿಗಳ ಸುತ್ತ ಬೀದಿ ನಾಯಿಗಳು ವಾಸಿಸುತ್ತಿವೆ. ಅಲ್ಲಿ ಸಿಗುವ ಮಾಂಸದ ತ್ಯಾಜ್ಯ ನಾಯಿಗಳನ್ನು ಆಕರ್ಷಿಸುತ್ತಿದೆ. ರುಚಿ ಕಂಡುಕೊಂಡ ನಾಯಿಗಳ ಪಡೆ ಮಾಂಸ ಸಿಗದೆ ಹೋದಾಗ ಸಮೀಪದಲ್ಲಿ ಸಿಗುವ ಕುರಿ ರೊಪ್ಪ ಅಥವಾ ಕೋಳಿ ಕುರಿಗಳನ್ನು ಹುಡುಕಿಕೊಂಡು ಹೋಗುತ್ತಿವೆ. ಕುರಿ, ಮೇಕೆ, ಕೋಳಿಗಳು ಬಲಿಯಾಗುತ್ತಿರುವುದು ಇದರ ಪರಿಣಾಮವಾಗಿಯೆ.

ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಯಾವುದೆ ಸೂತ್ರಗಳು ಇರುವುದು ಕಂಡುಬರುತ್ತಿಲ್ಲ. ಎಲ್ಲೆಂದರಲ್ಲಿ ಕೋಳಿ ತ್ಯಾಜ್ಯವನ್ನು ಬಿಸಾಡುತ್ತಿರುವುದರಿಂದ ನಾಯಿಗಳ ಹಾವಳಿ ಹೆಚ್ಚತೊಡಗಿದೆ. ಗುಂಪು ಗುಂಪಾಗಿ ಅಂತಹ ತ್ಯಾಜ್ಯದ ಕಡೆಗೆ ಓಡುವ ನಾಯಿಗಳ ಹಿಂಡು ವ್ಯಗ್ರಗೊಂಡು ಮನುಷ್ಯರ ಮೇಲೆ ಎರಗುತ್ತವೆ. ಬೀದಿನಾಯಿಗಳ ಹಾವಳಿ ಹಾಗೂ ತ್ಯಾಜ್ಯದ ಚೆಲ್ಲಾಪಿಲ್ಲಿ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬರುತ್ತಲೇ ಇವೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪತ್ರಿಕೆಗಳು ಇದರ ದುಷ್ಪರಿಣಾಮದ ಬಗ್ಗೆ ಬೆಳಕು ಚೆಲ್ಲುತ್ತಲೆ ಬಂದಿವೆ. ಆದರೆ ಪರಿಣಾಮ ಮಾತ್ರ ಶೂನ್ಯ.

ಸಂತಾನ ಹರಣ ಶಸ್ತ್ರಚಿಕಿತ್ಸೆ ಹೆಸರಿನಲ್ಲಿಯೂ ಅಕ್ರಮಗಳು ನಡೆದಿರುವ ಉದಾಹರಣೆಗಳಿವೆ. ಒಂದು ನಾಯಿಗೆ 800 ರೂ.ಗಳಿಂದ 1000 ರೂ.ಗಳವರೆಗೂ ಖರ್ಚು ತಗುಲುತ್ತದೆ ಎಂಬ ಅಂದಾಜು ಇಟ್ಟುಕೊಂಡರೆ ಎಷ್ಟು ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಿದರು ಎಂಬುದನ್ನು ಪತ್ತೆ ಹಚ್ಚುವವರು ಯಾರು? ಹೀಗೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರೆ ನಾಯಿಗಳ ಸಂತತಿ ಹೇಗೆ ದುಪ್ಪಟ್ಟಾಗುತ್ತಿತ್ತು? ಇಂತಹ ಹಲವು ಪ್ರಶ್ನೆಗಳು ಪ್ರಜ್ಞಾವಂತ ನಾಗರಿಕರನ್ನು ಕಾಡದೆ ಇರದು. ಆಡಳಿತ ಹಾಗೂ ಅಧಿಕಾರ ನಡೆಸುವವರಲ್ಲಿ ಕಾಳಜಿ ಇದ್ದರೆ ಇಂತಹ ಗೊಂದಲಗಳಿಗೆ ಪೂರ್ಣ ವಿರಾಮ ಹಾಕಬಹುದು.

ತುಮಕೂರು ನಗರ ಹಾಗೂ ತಾಲ್ಲೂಕುಗಳಲ್ಲಿ, ಹಳ್ಳಿಹಳ್ಳಿಗಳಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಸಂತತಿಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೆ ಹೋದರೆ ಮನುಷ್ಯರ ಜೀವಕ್ಕೆ ಹಾನಿಯಾಗುವ ಸಂದರ್ಭಗಳೆ ಹೆಚ್ಚು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ನಗರಾಡಳಿತ, ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಸಂಸ್ಥೆಗಳು ಎಚ್ಚೆತ್ತುಕೊಳ್ಳಬೇಕಿದೆ. ಕಾನೂನಿನ ವ್ಯಾಪ್ತಿಯಲ್ಲೆ ಇರುವ ಅವಕಾಶ ಬಳಸಿಕೊಂಡು ವ್ಯಗ್ರ ನಾಯಿಗಳ ಉಪಟಳದಿಂದ ಸಾರ್ವಜನಿಕರಿಗೆ ನೆಮ್ಮದಿ ದೊರಕಿಸಬೇಕಿದೆ.

ಶೆಡ್ ನಿರ್ಮಿಸಿ ಸಂತಾನಹರಣ ಮಾಡಲಿ
ಸ್ಥಳೀಯ ಆಡಳಿತಗಳು ಜನರ ಮೇಲೆ ಕರ ಹೇರುತ್ತಿವೆ. ಇದರಲ್ಲಿ ಶೇ.2 ಭಿಕ್ಷುಕರ ಕರವೂ ಇದೆ. ವಿವಿಧ ರೀತಿಯ ತೆರಿಗೆಗಳನ್ನು ಜನತೆ ಸ್ಥಳೀಯ ಆಡಳಿತಗಳಿಗೆ ಪಾವತಿಸುತ್ತಾ ಬರುತ್ತಿದ್ದಾರೆ. ಈ ಕರವನ್ನು ಉಪಯೋಗಿಸಿಕೊಂಡು ಇತರೆ ಮೂಲಗಳ ಸಹಾಯದಿಂದ ಪ್ರತಿ ತಾಲ್ಲೂಕಿನಲ್ಲಿ ಒಂದೊಂದು ಶೆಡ್ ನಿರ್ಮಾಣ ಮಾಡಿ, ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಕ್ರಮ ಕೈಗೊಳ್ಳಬಹುದು. ನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆಗೆ ಒಳಪಡಿಸಲು, ಅವುಗಳಿಗೆ ಆಹಾರ ಒದಗಿಸುವ ಪ್ರಕ್ರಿಯೆಗಳಿಗೆ ಎಸ್‍ಪಿಸಿಎ ಕಾಯ್ದೆ ಉಲ್ಲಂಘನೆಯಾಗುವುದಿಲ್ಲ. ಈ ಬಗ್ಗೆ ಒಂದಿಷ್ಟು ಚಿಂತನೆಗಳು ನಡೆಯಲಿ.

-ಡಾ.ಕೆ.ನಾಗಣ್ಣ, ಸಹಾಯಕ ನಿರ್ದೇಶಕರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap