ವಾಷಿಂಗ್ಟನ್:
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ನಂತರ ಅಮೆರಿಕದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಇದೀಗ ಟ್ರಂಪ್ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದು, ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ಗೆ ನಿರ್ಬಂಧ ಹೇರುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ. ಈ ನಿರ್ಬಂಧದ ಕುರಿತು ಗುರುವಾರ ಶ್ವೇತಭವನ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರವಾದ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಕಾನೂನು ಬಾಹಿರ ಹಾಗೂ ಆಧಾರ ರಹಿತ ಕ್ರಮ ತೆಗೆದುಕೊಂಡಿರುವುದಕ್ಕಾಗಿ ಟ್ರಂಪ್ ಈ ನಿರ್ಬಂಧವನ್ನು ಹೇರಿದ್ದೇವೆ ಎಂದು ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಪ್ರವಾಸದಲ್ಲಿದ್ದಾಗಲೇ ಟ್ರಂಪ್‌ರಿಂದ ಈ ಆದೇಶ ಹೊರ ಬಿದ್ದಿದೆ. ಹೊಸ ಆದೇಶದ ಪ್ರಕಾರ ಅಮೆರಿಕಾ ಅಥವಾ ಅದರ ಮಿತ್ರ ರಾಷ್ಟ್ರಗಳ ಮೇಲೆ ತನಿಖೆಗೆ ಸಹಾಯ ಮಾಡುವ ವ್ಯಕ್ತಿಗಳು ಹಾಗೂ ಅವರ ಕುಟುಂಬಕ್ಕೆ ಹಣಕಾಸು ಹಾಗೂ ವೀಸಾ ನಿರ್ಬಂಧನೆಯನ್ನು ಹೇರಲಾಗುತ್ತದೆ.
ಕಳೆದ ವರ್ಷ ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧಕ್ಕೆ ಸಂಬಂಧಿಸಿದ ಅಪರಾಧಕ್ಕೆ ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಕಳೆದ ನವೆಂಬರ್‌ನಲ್ಲಿ ಬಂಧನ ವಾರಂಟ್ ಹೊರಡಿಸಿತ್ತು. ಹಮಾಸ್ ಕಮಾಂಡರ್ ಮೇಲೆಯೂ ಇದೇ ರೀತಿಯ ವಾರಂಟ್ ಜಾರಿಯಾಗಿತ್ತು. ಇದೀಗ ಅಮೆರಿಕ ಅದರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದು, ನ್ಯಾಯಾಲಯವು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಟ್ರಂಪ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೆ ಕೋರ್ಟ್‌ನ ಇತ್ತೀಚಿನ ನಡೆಗಳು ಪೂರ್ವಾಗ್ರಹ ಪೀಡಿತ ನಡೆಯಾಗಿ. ಕೋರ್ಟ್ ಅಮೆರಿಕನ್ನರಿಗೆ ಕಿರುಕುಳ ನೀಡಿದೆ ಎಂದು ಟ್ರಂಪ್ ಹೇಳಿದ್ದಾರೆ. ಈ ದುರುದ್ದೇಶಪೂರಿತ ನಡವಳಿಕೆಯು ಅಮೆರಿಕದ ಸಾರ್ವಭೌಮತ್ವವನ್ನು ಉಲ್ಲಂಘಿಸುವ ಹಾಗೂ ಮಿತ್ರ ರಾಷ್ಟ್ರ ರಾಷ್ಟ್ರೀಯ ಭದ್ರತೆ ಹಾಗೂ ವಿದೇಶಾಂಗ ನೀತಿಯನ್ನು ದುರ್ಬಲಗೊಳಿಸುವಂತಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಇರಾನ್ ಮತ್ತು ಇಸ್ರೇಲ್ ವಿರೋಧಿ ಗುಂಪುಗಳನ್ನು ನಿರ್ಲಕ್ಷಿಸಿ, ಇಸ್ರೇಲ್‌ನ ಮೇಲೆ ಇಸಿಸಿ ಆರೋಪ ಮಾಡಿದೆ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ತಮ್ಮ ಮೊದಲ ಅಧಿಕಾರಾವಧಿಯಲ್ಲಿ, ಅಮೆರಿಕದ ಪಡೆಗಳು ಅಫ್ಘಾನಿಸ್ತಾನದಲ್ಲಿ ಯುದ್ಧ ಅಪರಾಧಗಳನ್ನು ಎಸಗಿವೆಯೇ ಎಂದು ತನಿಖೆ ನಡೆಸುತ್ತಿದ್ದ ಐಸಿಸಿ ಅಧಿಕಾರಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದರು. ಆ ನಿರ್ಬಂಧಗಳನ್ನು ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್ ಆಡಳಿತವು ತೆಗೆದು ಹಾಕಿತ್ತು.
