ವಾಷಿಂಗ್ಟನ್:
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ದೇಶದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದ್ದಾರೆ. ಟ್ರಂಪ್ ಪ್ರಾರಂಭಿಸಿದ್ದ ತೆರಿಗೆ ಯುದ್ದಕ್ಕೆ ಕೋರ್ಟ್ ಈಗ ತಡೆ ಹಿಡಿದಿದೆ. ಅಮೆರಿಕದ ವ್ಯಾಪಾರ ಪಾಲುದಾರರಿಂದ ಆಮದುಗಳ ಮೇಲೆ ವ್ಯಾಪಕ ಸುಂಕ ವಿಧಿಸುವ ಮೂಲಕ ಅಧ್ಯಕ್ಷ ತಮ್ಮ ಅಧಿಕಾರವನ್ನು ಮೀರಿದ್ದಾರೆ ಎಂದು ಕೋರ್ಟ್ ಹೇಳಿದೆ. ಈ ಮೂಲಕ ಡೊನಾಲ್ಡ್ ಟ್ರಂಪ್ ಆಡಳಿತ ಜಾರಿಗೆ ತರಲು ಮುಂದಾಗಿದ್ದ ವ್ಯಾಪಕ ತೆರಿಗೆ ನೀತಿಗೆ ಬ್ರೇಕ್ ಹಾಕಿದೆ. ಈ ಮೂಲಕ ಟ್ರಂಪ್‌ಗೆ ಭಾರೀ ಹಿನ್ನಡೆಯಾಗಿದೆ.
ಅಮೆರಿಕದ ವಾಣಿಜ್ಯ ನ್ಯಾಯಾಲಯ ಟ್ರಂಪ್ ಓಟಕ್ಕೆ ಬ್ರೇಕ್ ಹಾಕಿದೆ. ಅಮೆರಿಕ ಕಾಂಗ್ರೆಸ್‌ಗೆ ಮಾತ್ರ ವಾಣಿಜ್ಯ ನೀತಿ ನಿಯಮ ರೂಪಿಸುವ ಅಧಿಕಾರವನ್ನು ಅಮೆರಿಕ ಸಂವಿಧಾನ ನೀಡಿದೆ ಎಂದು ಕೋರ್ಟ್ ಸರ್ಕಾರಕ್ಕೆ ತಿಳಿಸಿದೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು ನಡೆಸಿದ ಭಯೋತ್ಪಾದಕ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಏರ್ಪಟ್ಟಿತ್ತು. ಆಗ ಕದನ ವಿರಾಮ ಏರ್ಪಡಿಸಲು ಟ್ರಂಪ್ ಉಭಯ ದೇಶಗಳಿಗೆ ವ್ಯಾಪಾರ ನಿರ್ಬಂಧದ ಬೆದರಿಕೆಯನ್ನು ಹಾಕಿದ್ದರು. ಅದರ ಕುರಿತೂ ಕೂಡ ನ್ಯಾಯಾಲಯ ಉಲ್ಲೇಖ ಮಾಡಿದೆ.
ಎಲ್ಲಾ ವಾದಗಳನ್ನು ತಿರಸ್ಕರಿಸಿದ ಮ್ಯಾನ್‌ಹ್ಯಾಟನ್ ಮೂಲದ ಮೂವರು ನ್ಯಾಯಾಧೀಶರ ಅಂತಾರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯ ಐಇಇಪಿಎ ಅಡಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರಿಗೆ “ಅಪರಿಮಿತ” ಅಧಿಕಾರಗಳನ್ನು ನಿಯೋಜಿಸಿಲ್ಲ ಎಂದು ತೀರ್ಪು ನೀಡಿತು. “ಅಸಾಮಾನ್ಯ ಮತ್ತು ಅಸಾಧಾರಣ ಬೆದರಿಕೆಯನ್ನು ಎದುರಿಸಲು” ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಗತ್ಯ ಆರ್ಥಿಕ ನಿರ್ಬಂಧಗಳನ್ನು ವಿಧಿಸಲು ಮಾತ್ರ ಅಧ್ಯಕ್ಷರಿಗೆ ಅಧಿಕಾರ ನೀಡುತ್ತದೆ ಎಂದು ಪೀಠ ಹೇಳಿದೆ. ಅಮೆರಿಕದ ಆರ್ಥಿಕತೆಯನ್ನು ರಕ್ಷಿಸಲು, ಅಮೆರಿಕದ ಸಂವಿಧಾನವು ಕಾಂಗ್ರೆಸ್‌ಗೆ ವಿಶೇಷ ಅಧಿಕಾರವನ್ನು ನೀಡುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಅಮೆರಿಕ ಪ್ರವೇಶಿಸುವ ಚೀನಾದ ಸಾಮಗ್ರಿಗಳ ಮೇಲೆ ಶೇ. 104ರಷ್ಟು ತೆರಿಗೆ ವಿಧಿಸಿದ್ದರು. ಅದಕ್ಕೆ ಬಗ್ಗದ ಚೀನಾಕ್ಕೆ ಮತ್ತೆ ಬಿಸಿ ಮುಟ್ಟಿಸಲೆತ್ನಿಸಿರುವ ಅವರು, ಚೀನಾದ ವಸ್ತುಗಳ ಮೇಲೆ ಶೇ. 245ರಷ್ಟು ತೆರಿಗೆ ವಿಧಿಸಿದ್ದರು. ಚೀನಾ ಮಾತ್ರವಲ್ಲದೇ ಹಲವಾರು ದೇಶಗಳ ಮೇಲೆ ಟ್ರಂಪ್ ತೆರಿಗೆಯನ್ನು ಹಾಕಿದ್ದರು.
