ರಾಜಿ ಮಾಡಿಕೊಂಡವರು ರಾಜಕೀಯವಾಗಿ ಉಳಿಯುವುದಿಲ್ಲ, ಬೆಳೆಯುವುದಿಲ್ಲ: ಸಿದ್ದರಾಮಯ್ಯ

ಬೆಂಗಳೂರು:

   ಯುವ ಕಾಂಗ್ರೆಸ್ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೋಧಕರಾಗಿ, ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾಜವಾದ ಮತ್ತು ಜಾತ್ಯತೀತತೆಯನ್ನು ಎತ್ತಿಹಿಡಿಯುವಂತೆ ಯುವ ಕಾಂಗ್ರೆಸ್ ಮುಖಂಡರಿಗೆ ಕರೆ ನೀಡಿದರು.

   ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಹಾಗೂ “ಯುವ ಶಕ್ತಿ ಪ್ರತಿಜ್ಞೆ 2025” ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಿ ಮಾತನಾಡಿದ ಅವರು, ಸಂಘ ಪರಿವಾರ ನಮ್ಮ ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದವನ್ನು ತೆಗೆದು ಹಾಕಲು ಷಡ್ಯಂತ್ರ ನಡೆಸುತ್ತಿದೆ. ಬಿಜೆಪಿ ತನ್ನ ಹುಟ್ಟಿನಿಂದಲೇ‌ ಸಾಮಾಜಿಕ ನ್ಯಾಯದ ವಿರೋಧಿ ಆಗಿರುವುದರಿಂದ ಹೀಗೆ ಮಾಡುತ್ತಿದೆ. ಈ ಷಡ್ಯಂತ್ರವನ್ನು ರಾಜ್ಯದ ಮತ್ತು ದೇಶದ ಯುವ ಜನತೆ ಸೋಲಿಸಲು ಕಟ್ಟಿಬದ್ಧವಾಗಿ ನಿಂತು ಹೋರಾಟ ಮುನ್ನಡೆಸುತ್ತದೆ ಎನ್ನುವ ಭರವಸೆ ನನಗಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಸೈದ್ಧಾಂತಿಕವಾಗಿ ಯಾವತ್ತೂ ರಾಜಿ ಮಾಡಿಕೊಳ್ಳಬಾರದು. ರಾಜಿ ಮಾಡಿಕೊಂಡವರು ರಾಜಕೀಯವಾಗಿ ಉಳಿಯುವುದಿಲ್ಲ, ಬೆಳೆಯುವುದಿಲ್ಲ ಎಂದು ಹೇಳಿದರು.

   ಬಿಜೆಪಿ ಪಕ್ಷಕ್ಕೆ ಭಾರತೀಯ ಸಮಾಜಕ್ಕೆ ಪೂರಕವಾದ ಸಿದ್ಧಾಂತವೇ ಇಲ್ಲ. ಸಮಾಜವನ್ನು ವಿಭಜಿಸುವ ಸಿದ್ಧಾಂತ ಬಿಜೆಪಿಯದ್ದು. ಜೆಡಿಎಸ್ ರಾಜ್ಯದ ಕೆಲವೇ ಸ್ಥಳಗಳಲ್ಲಿ ಅಸ್ತಿತ್ವದಲ್ಲಿದೆ, ಈ ಪಕ್ಷಕ್ಕೂ ಸರಿಯಾದ ಸಿದ್ಧಾಂತ ಇಲ್ಲ. ಮಂಡಲ್ ಕಮಿಷನ್ ವರದಿಯನ್ನು ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಕೊಟ್ಟಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಮಂಡಲ್ ವರದಿಯನ್ನು ವಿರೋಧಿಸಿದ್ದು ಇದೇ ಕಮಂಡಲವಾದಿಗಳು ಮತ್ತು ಮನುವಾದಿಗಳು. ಇವರ ಈ ಜನವಿರೋಧಿ ಇತಿಹಾಸವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ನೆನಪಿಡಬೇಕು.

    ಮಹಿಳಾ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ರಾಜೀವ್ ಗಾಂಧಿಯವರು ಸಂವಿಧಾನಕ್ಕೆ ತಿದ್ದುಪಡಿ ತಂದು 35% ಮಹಿಳಾ ಮೀಸಲಾತಿ ತಂದರು. ಈ ಮೀಸಲಾತಿಯನ್ನು 50% ಗೆ ಹೆಚ್ಚಿಸಲು ಹೋರಾಟ ಮಾಡಿದ್ದು ಸೋನಿಯಾಗಾಂಧಿ. ಇದನ್ನು ಕೂಡ ನೆನಪಿಡಬೇಕು ಎಂದು ತಿಳಿಸಿದರು. ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದ ಯುವ ಕಾಂಗ್ರೆಸ್ ಜಾತ್ಯತೀತ ಸೇನಾನಿಗಳು ಸೈದ್ಧಾಂತಿಕ ಹೋರಾಟ ಮುಂದುವರೆಸುತ್ತಾರೆ, ಸೈದ್ಧಾಂತಿಕವಾಗಿ ಯುವ ಸಂಘಟನೆಯನ್ನು ಬಲಗೊಳಿಸುತ್ತಾರೆ ಎಂದು ನಂಬಿದ್ದೇನೆ. ಕಾಂಗ್ರೆಸ್ ಭಾರತ ದೇಶಕ್ಕೆ ಬ್ರಿಟೀಷರ ಗುಲಾಮಗಿರಿಯಿಂದ ಸ್ವಾತಂತ್ರ್ಯ ಕೊಡಿಸಿತು. ಆದರೆ ಸಂಘ ಪರಿವಾರವು ಬ್ರಿಟಿಷರ ಜೊತೆ ಶಾಮೀಲಾಗಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿತು್ತು ಎನ್ನುವುದು ಇತಿಹಾಸ. ಆರ್‌ಎಸ್‌ಎಸ್ 1925ರಲ್ಲೇ ಆರಂಭವಾದರೂ ಯಾವತ್ತೂ ಕೂಡ ಹೆಡಗೆವಾರ್ ಆಗಲಿ, ಗುರೂಜಿ ಹೆಸರಿನವರಾಗಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆಗಲಿಲ್ಲ. ಇದನ್ನು ಯುವ‌ಮಿತ್ರರು ಅರ್ಥ ಮಾಡಿಕೊಳ್ಳಬೇಕು.

   ಆರ್‌ಎಸ್‌ಎಸ್‌ನ ರಾಜಕೀಯ ಮುಖವಾಗಿ ಜನಸಂಘ ಆರಂಭವಾಯಿತು. ಬಳಿಕ ಬಿಜೆಪಿ ಆಯಿತು. ಇವರು ದೇಶಭಕ್ತಿ ಬಗ್ಗೆ ಭಯಾನಕವಾಗಿ ಮಾತನಾಡುತ್ತಾರೆ, ಆದರೆ, ದೇಶದ ಸ್ವಾತಂತ್ರ್ಯ ಹೋರಾಟದಿಂದ ದೂರ ಉಳಿದಿದ್ದರು. ಭಾರತೀಯ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಬಿಜೆಪಿ ಮಾಡುವುದೇ ಇಲ್ಲ. ಮೋದಿ ಅವರು ಬಾಯಲ್ಲಿ “ಸಬ್ ಕ ಸಾಥ್ – ಸಬ್ ಕ ವಿಕಾಸ್” ಅಂತ ಡೈಲಾಗ್ ಹೊಡಿತಾರೆ. ಆದರೆ, ಬಿಜೆಪಿಯಲ್ಲಿರುವ 240 ಮಂದಿ ಸಂಸದರಲ್ಲಿ ಒಬ್ಬರೂ ಅಲ್ಪ ಸಂಖ್ಯಾತ ಸಮುದಾಯದವರಿಲ್ಲ.

    ತಮ್ಮನ್ನು ಚುನಾವಣೆಯಲ್ಲಿ ಸೋಲಿಸಿದ್ದು ಆರ್‌ಎಸ್‌ಎಸ್‌ನ ಸಾವರ್ಕರ್ ಎಂದು ಸ್ವತಃ ಅಂಬೇಡ್ಕರ್ ಅವರೇ ಪತ್ರ ಬರೆದಿದ್ದಾರೆ. ಇದನ್ನು ಯುವ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಸುವ ಕೆಲಸವನ್ನು ಯುವ ಕಾಂಗ್ರೆಸ್ ಸೇನಾನಿಗಳು ಮಾಡಬೇಕು. ಯುವ ಕಾಂಗ್ರೆಸ್ ಚುನಾವಣೆ ಮುಗಿದ ಮೇಲೆ ಮುಗಿಯಿತು. ಗೆದ್ದವರು, ಸೋತವರೆಲ್ಲಾ ಒಟ್ಟಾಗಿ ಹೋಗಬೇಕು. ಗುಂಪುಗಾರಿಕೆ ಬೇಡ, ಒಬ್ಬ ನಾಯಕರ ಹಿಂದೆ ಹೋಗಬಾರದು. ಸಿದ್ಧಾಂತವೇ ನಾಯಕತ್ವ. ಸಿದ್ಧಾಂತದ ಜೊತೆಗೆ ನೀವೆಲ್ಲಾ ಇರಬೇಕು.

    ಬಿಜೆಪಿ ಅಧಿಕಾರದಲ್ಲಿದ್ದಾಗ ಮೈಸೂರಿಗೆ ಏನಾದ್ರೂ ಮಾಡಿದ್ರಾ? ಇಲ್ಲಿರುವ ಮಹಾರಾಣಿ ಕಾಲೇಜು, ಜಿಲ್ಲಾ ಆಸ್ಪತ್ರೆ, ಜಯದೇವ ಆಸ್ಪತ್ರೆ ಸೇರಿ ಇಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳೆಲ್ಲಾ ನಮ್ಮಿಂದ ಆಗಿದ್ದು. ನಾನು ಮುಖ್ಯಮಂತ್ರಿಯಾಗಿರುವಾಗ ಕಾಂಗ್ರೆಸ್ ಸರ್ಕಾರ ಮೈಸೂರಿನ ಅಭಿವೃದ್ಧಿ ಮಾಡಿದ್ದೇ ಹೊರತು ಬುರುಡೆ ಬಿಜೆಪಿ‌ ಮಾಡಿದ್ದೇನೂ ಇಲ್ಲ. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ನಮ್ಮ ಜೊತೆ ಒಂದೇ ವೇದಿಕೆಯಲ್ಲಿ‌ ಬಹಿರಂಗ ಚರ್ಚೆಗೆ ಬರಲಿ. ನಾನೇ ಬರುತ್ತೇನೆ. ಈ ಸವಾಲನ್ನು‌ ಬಿಜೆಪಿ‌ ಸ್ವೀಕರಿಸಲು ಸಿದ್ಧವಿಲ್ಲ ಏಕೆ? ಬಿಜೆಪಿ ಏನೂ ಕೆಲಸ ಮಾಡದೆ ಕೇವಲ ಬರೀ ಬುರುಡೆ ಬಿಡುತ್ತದೆ. ಬಿಜೆಪಿಯವರು ಕೆಲಸ ಮಾಡಿದ ಸಾಕ್ಷಿ ಗುಡ್ಡೆ ತೋರಿಸಲಿ ಎಂದು ಸವಾಲು ಹಾಕಿದರು.

Recent Articles

spot_img

Related Stories

Share via
Copy link