ನವದೆಹಲಿ:
ಭಾರತ ಸರ್ಕಾರವು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಹೊಸ ಸೈಬರ್ ಭದ್ರತೆ ಎಚ್ಚರಿಕೆಯನ್ನು ಜಾರಿಗೊಳಿಸಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೆಚ್ಚುತ್ತಿರುವ ನಕಲಿ ಹಣಕಾಸು ಸಂಬಂಧಿ ಮೊಬೈಲ್ ಆ್ಯಪ್‌ಗಳ ಬಗ್ಗೆ ಎಚ್ಚರಿಕೆ ನೀಡಿದೆ. ಈ ಅಪ್ಲಿಕೇಶನ್‌ಗಳು ಮೇಲ್ನೋಟಕ್ಕೆ ನಿಜವಾದವು ಎಂಬಂತೆ ಕಾಣುತ್ತಿದ್ದರೂ, ಬಳಕೆದಾರರ ವೈಯಕ್ತಿಕ ಮತ್ತು ಆರ್ಥಿಕ ಮಾಹಿತಿಯನ್ನು ಕದಿಯಲು ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.
ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ (I4C) ತನ್ನ ಸೈಬರ್ ದೋಸ್ತ್ ಅಧಿಕೃತ ಸಾಮಾಜಿಕ ಮಾಧ್ಯಮ ಪುಟಗಳ ಮೂಲಕ ಈ ಎಚ್ಚರಿಕೆಯನ್ನು ಬಿಡುಗಡೆ ಮಾಡಿದೆ. ಅನೇಕ ಅಪ್ಲಿಕೇಶನ್‌ಗಳು ಸಂಘಟಿತ ಅಪರಾಧಿಗಳು ಅಥವಾ ಕಾನೂನುಬಾಹಿರ ವಿದೇಶಿ ಕಂಪನಿಗಳ ಜೊತೆ ಸಂಬಂಧ ಹೊಂದಿವೆ ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಈ ಅಪ್ಲಿಕೇಶನ್‌ಗಳು ಬಳಕೆದಾರರ ಗೌಪ್ಯತೆ, ಆರ್ಥಿಕ ಭದ್ರತೆ ಮತ್ತು ಡೇಟಾ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತವೆ ಎಂದು ಸೈಬರ್ ದೋಸ್ತ್ ತಿಳಿಸಿದೆ.
ತೀವ್ರ ಹಾನಿಕಾರಕ ಎಂದು ಗುರುತಿಸಲಾದ ಆಪ್‌ಗಳ ಪಟ್ಟಿಯಲ್ಲಿ Invoicer Experts, Loan Raina – Instant Loan Online, Gupta Credit – Safe and Handy, GranetSwift, LoanQ | Financial Calculator, CreditEdge, Ultimate Lend, SmartRich Pro, CreditLens, Cash Loan – EMI Calculator ಅಪ್ಲಿಕೇಶನ್‌ಗಳು ಕಂಡುಬಂದಿವೆ. ಈ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿದ್ದರೂ, ಅವುಗಳನ್ನು ಡೌನ್‌ಲೋಡ್ ಮಾಡದಿರಲು ಅಥವಾ ಬಳಸದಿರಲು ಸರ್ಕಾರ ಸೂಚಿಸಿದೆ.
ಇದೇ ವೇಳೆ, ಫೋನ್ ಕರೆಗಳ ಸಂದರ್ಭದಲ್ಲಿ ಇಂಟರ್‌ನೆಟ್ ಸಂಪರ್ಕವನ್ನು ಆನ್‌ನಲ್ಲಿ ಇರಿಸಿಕೊಂಡರೆ, ಕೆಲವು ಅಪ್ಲಿಕೇಶನ್‌ಗಳು ಆಲಿಸುವ ಸಾಧ್ಯತೆಯಿದೆ ಎಂದು ಮತ್ತೊಂದು ಎಚ್ಚರಿಕೆಯನ್ನು ಸರ್ಕಾರ ನೀಡಿದೆ. ಈ ಅಪ್ಲಿಕೇಶನ್‌ಗಳು ಬಳಕೆದಾರರ ಸಂಭಾಷಣೆಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ, ದುರ್ಬಳಕೆ ಮಾಡಬಹುದು ಎಂದು ತಿಳಿಸಲಾಗಿದೆ.
ಬಳಕೆದಾರರಿಗೆ ಸಲಹೆಯಾಗಿ, ಗೂಗಲ್ ಪ್ಲೇ ಸ್ಟೋರ್‌ನಿಂದ ಆಪ್‌ಗಳನ್ನು ಡೌನ್‌ಲೋಡ್ ಮಾಡುವ ಮೊದಲು ಅವುಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಮತ್ತು ಅಗತ್ಯವಿಲ್ಲದ ವಿವರಗಳನ್ನು ನೀಡದಂತೆ ಸೈಬರ್ ದೋಸ್ತ್ ಕರೆ ನೀಡಿದೆ. ಯಾವುದೇ ಅನುಮಾನಾಸ್ಪದ ಅಪ್ಲಿಕೇಶನ್‌ಗಳನ್ನು ತಕ್ಷಣ ಅನ್‌ಇನ್‌ಸ್ಟಾಲ್ ಮಾಡಿ, ಸೈಬರ್ ಕ್ರೈಂ ಹೆಲ್ಪ್‌ಲೈನ್‌ಗೆ ವರದಿ ಮಾಡುವಂತೆ ಸೂಚಿಸಲಾಗಿದೆ.