ಮೆದುಳಿನ ಆರೋಗ್ಯ ನಮ್ಮೆಲ ಹೊಣೆ : ನಿರ್ಲಕ್ಷ್ಯ ಬೇಡ…!

ಅಂಕಣ:

    ದಿನನಿತ್ಯದ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವವರ ಸಂಖ್ಯೆ ಅತ್ಯಧಿಕವಾಗಿದೆ. ಒಂದಲ್ಲಾ ಒಂದು ರೀತಿಯಲ್ಲಿ ನಾವು ಪ್ಲಾಸ್ಟಿಕ್ ಬಳಕೆ ಮಾಡುತ್ತೇವೆ. ಇದು ನಮಗೆ ಅರಿವಿಲ್ಲದಂತೆ ನಮ್ಮ ಆರೋಗ್ಯವನ್ನು ಹಂತ ಹಂತವಾಗಿ ಹಾಳು ಮಾಡುತ್ತಿದೆ. ಅದರಲ್ಲಿಯೂ ಮೈಕ್ರೋಪ್ಲಾಸ್ಟಿಕ್ ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದು ನಮ್ಮ ದೇಹವನ್ನು ಸೇರಬಹುದು ಎಂಬ ಭಯ ಕಾಡುತ್ತಿತ್ತು. ಆದರೆ ಈಗ ಇವು ನಮ್ಮ ಮೆದುಳನ್ನು ತಲುಪಿವೆ ಎಂದು ಹೊಸ ಸಂಶೋಧನೆ ತೋರಿಸಿಕೊಟ್ಟಿದೆ. ಹೌದು ಇದು ಸತ್ಯ, ಈ ಅಧ್ಯಯನವು ಮೊದಲ ಬಾರಿಗೆ, ಮಾನವ ಮೆದುಳಿನಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳಿರುವುದನ್ನು ಕಂಡು ಹಿಡಿದಿದೆ.

    ಇತ್ತೀಚಿನ ಸಂಶೋಧನೆಗಳು, ಪ್ಲಾಸ್ಟಿಕ್ ತುಣುಕು ನಮ್ಮ ಆರೋಗ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದು, ಇದೀಗ ಯುನೈಟೆಡ್ ಸ್ಟೇಟ್ಸ್ ನಡೆಸಿರುವ ಅಧ್ಯಯನವು ಮಾನವನ ಮೆದುಳಿನಲ್ಲಿ ಮೊದಲ ಬಾರಿಗೆ ಮೈಕ್ರೋಪ್ಲಾಸ್ಟಿಕ್​​​​ಗಳನ್ನು ಕಂಡು ಹಿಡಿದಿದೆ. ಇದು ಅತ್ಯಂತ ಆಘಾತಕಾರಿ ಮತ್ತು ಆತಂಕಕಾರಿ ವಿಷಯವಾಗಿದ್ದು ಇನ್ನಾದರೂ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

    ನಿಮಗೆ ತಿಳಿದಿರಬಹುದು, ಪ್ಲಾಸ್ಟಿಕ್ ಸಣ್ಣ ಕಣಗಳನ್ನು ನಾವು ಮೈಕ್ರೋಪ್ಲಾಸ್ಟಿಕ್ ಎಂದು ಕೆರೆಯುತ್ತೇವೆ. ಇದು ಐದು ಮಿಲಿಮೀಟರ್ ಗಳಿಗಿಂತ ಚಿಕ್ಕದಾಗಿರುತ್ತವೆ. ಇದು ಕೆಲವೊಮ್ಮೆ ಬರಿಗಣ್ಣಿನಿಂದ ನೋಡಲು ಕೂಡ ಸಾಧ್ಯವಿರುವುದಿಲ್ಲ, ಅಷ್ಟು ಚಿಕ್ಕದಾಗಿರುತ್ತದೆ. ಆದರೆ ಇದನ್ನು ವಿವರಿಸಲು ಬಳಸುವ ಅನೇಕ ಚಿತ್ರಗಳು ನಮ್ಮನ್ನು ದಾರಿತಪ್ಪಿಸಬಹುದು. ನಾವು ದಿನನಿತ್ಯ ಕುಡಿಯುವ ನೀರು ಮತ್ತು ದೈನಂದಿನ ಆಹಾರ ಪದಾರ್ಥಗಳ ಅನೇಕ ಮೂಲಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಗಳು ವರದಿಯಾಗಿವೆ. ಇದರರ್ಥ ನಾವು ನಮ್ಮ ಆಹಾರದಲ್ಲಿ ನಿರಂತರವಾಗಿ ಅವುಗಳ ಸೇವನೆ ಮಾಡುತ್ತಿದ್ದೇವೆ. ಇದು ದೀರ್ಘಕಾಲದ ವರೆಗೆ ಮುಂದುವರೆದರೆ ಮಾನವನ ಆರೋಗ್ಯಕ್ಕೆ ಗಂಭೀರ ಸಮಸ್ಯೆಗಳಾಗಬಹುದು.  

    ಯಕೃತ್ತು ಮತ್ತು ಮೂತ್ರಪಿಂಡಕ್ಕಿಂತ ಮೆದುಳಿನಲ್ಲಿ 30 ಪಟ್ಟು ಹೆಚ್ಚು ಮೈಕ್ರೋಪ್ಲಾಸ್ಟಿಕ್ಗಳನ್ನು ಕಂಡು ಸಂಶೋಧಕರು ಆಶ್ಚರ್ಯಪಟ್ಟಿದ್ದು, ಮೆದುಳಿಗೆ ಹೆಚ್ಚಿನ ರಕ್ತದ ಹರಿವಿರುವುದು (ಅದರೊಂದಿಗೆ ಪ್ಲಾಸ್ಟಿಕ್ ಕಣಗಳನ್ನು ಸಾಗುತ್ತವೆ) ಇದಕ್ಕೆ ಕಾರಣವಾಗಿರಬಹುದು ಎಂದು ಸಂಶೋಧಕರು ಹೇಳುತ್ತಾರೆ. ಅದಲ್ಲದೆ 2016 ರಿಂದ 2024 ರ ನಡುವೆ ಮೆದುಳಿನಲ್ಲಿ ಪ್ಲಾಸ್ಟಿಕ್ ಪ್ರಮಾಣವು ಸುಮಾರು 50% ಹೆಚ್ಚಾಗಿದೆ ಎಂದು ಸಂಶೋಧಕರು ಕಂಡು ಕೊಂಡಿದ್ದಾರೆ. ಇದಕ್ಕೆ ಪರಿಸರದಲ್ಲಿ ಹೆಚ್ಚಾಗಿರುವ ಪ್ಲಾಸ್ಟಿಕ್ ಮತ್ತು ಮಾಲಿನ್ಯದ ಹೆಚ್ಚಳ ಕಾರಣವಾಗಿರಬಹುದು ಅಥವಾ ಇನ್ನಿತರ ಕಾರಣಗಳಿರಬಹುದು.

   ಮೈಕ್ರೋಪ್ಲಾಸ್ಟಿಕ್ ಗಳು ಹೆಚ್ಚಾಗಿ ಪಾಲಿಥಿಲೀನ್ ನಿಂದ ಕೂಡಿದ್ದು. ಪ್ಲಾಸ್ಟಿಕ್ ಬಾಟಲ್ ಕ್ಯಾಪ್ ಗಳು ಮತ್ತು ಪ್ಲಾಸ್ಟಿಕ್ ಚೀಲಗಳಂತಹ ಅನೇಕ ದೈನಂದಿನ ಉತ್ಪನ್ನಗಳಿಂದ ಇದು ನಮ್ಮ ದೇಹವನ್ನು ಸೇರಬಹುದು. ಅಥವಾ ಮೈಕ್ರೋಪ್ಲಾಸ್ಟಿಕ್ ಗಳು ಸಾಮಾನ್ಯವಾಗಿ ಕಲುಷಿತ ಆಹಾರ ಮತ್ತು ನೀರಿನ ಮೂಲಕ ದೇಹವನ್ನು ಪ್ರವೇಶಿಸುತ್ತವೆ. ನಂತರ ಇದು ಉರಿಯೂತವನ್ನು ಉಂಟು ಮಾಡುತ್ತದೆ. ಜೊತೆಗೆ ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಇದು ನಾವು ಉಸಿರಾಡುವ ಗಾಳಿಯ ಮೂಲಕವೂ ಅಂದರೆ ಉಸಿರಾಡುವಾಗ ಈ ಕಣಗಳು ಕರುಳು ಅಥವಾ ಶ್ವಾಸಕೋಶಕ್ಕೆ ಬಂದು ದೇಹದ ವಿವಿಧ ಅಂಗಗಳಿಗೆ ಹೋಗಬಹುದು. ಅಲ್ಲದೆ ಮಾನವನ ಮಲ, ಕೀಲುಗಳು, ಯಕೃತ್ತು, ಸಂತಾನೋತ್ಪತ್ತಿ ಅಂಗಗಳು, ರಕ್ತ, ನಾಳಗಳು ಮತ್ತು ಹೃದಯಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳಿರುವುದು ಅಧ್ಯಯನಗಳ ಮೂಲಕ ಕಂಡುಕೊಳ್ಳಲಾಗಿದೆ. 

  ಮಾನವನ ಮೆದುಳಿನಲ್ಲಿ ಮೈಕ್ರೋಪ್ಲಾಸ್ಟಿಕ್ ಗಳು ಇರುವುದರಿಂದ ಯಾವ ರೀತಿಯ ಪರಿಣಾಮಗಳು ಉಂಟಾಗಬಹುದು ಎಂಬುದು ಇನ್ನೂ ಸರಿಯಾಗಿ ತಿಳಿದಿಲ್ಲ. ಆದರೆ ಕೆಲವು ಪ್ರಯೋಗಗಳಿಂದ, ಮೈಕ್ರೋಪ್ಲಾಸ್ಟಿಕ್ ಗಳು ಮೆದುಳಿನ ಉರಿಯೂತ ಮತ್ತು ಜೀವಕೋಶದ ಹಾನಿಯನ್ನು ಹೆಚ್ಚಿಸುತ್ತವೆ ಮತ್ತು ಮೆದುಳಿನ ರಚನೆಯನ್ನು ಬದಲಾಯಿಸುತ್ತವೆ ಎಂಬುದು ತಿಳಿದು ಬಂದಿದೆ. ಅದೂ ಅಲ್ಲದೆ ಮೈಕ್ರೋಪ್ಲಾಸ್ಟಿಕ್ ಗಳು ಮತ್ತು ಅವುಗಳ ಪರಿಣಾಮಗಳನ್ನು ಅಧ್ಯಯನ ಮಾಡುವುದು ಕಷ್ಟ. ಅವು ತುಂಬಾ ಸಣ್ಣ ಗಾತ್ರದಲ್ಲಿರುತ್ತದೆ ಜೊತೆಗೆ, ಪರಿಸರದಲ್ಲಿ ಅನೇಕ ರೀತಿಯ ಪ್ಲಾಸ್ಟಿಕ್ ಗಳಿವೆ. ಪ್ಲಾಸ್ಟಿಕ್ ಉತ್ಪನ್ನಗಳಲ್ಲಿ 13,000 ಕ್ಕೂ ಹೆಚ್ಚು ವಿಭಿನ್ನ ರಾಸಾಯನಿಕಗಳನ್ನು ಗುರುತಿಸಲಾಗಿದೆ, ಪ್ರತಿ ವರ್ಷ ಈ ಸಂಖ್ಯೆ ಹೆಚ್ಚುತ್ತದೆ. 

   ಮೈಕ್ರೋಪ್ಲಾಸ್ಟಿಕ್ ಗಳು ಪರಿಸರದಲ್ಲಿ ವ್ಯಾಪಕವಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದ ವಿಚಾರ. ಹಾಗಾಗಿ ಇದನ್ನು ಬಳಕೆ ಮಾಡದೆಯೇ ಇರುವುದು ಕಷ್ಟ. ಆದರೆ ಮೈಕ್ರೋಪ್ಲಾಸ್ಟಿಕ್ ಗಳು ನಮ್ಮ ಆರೋಗ್ಯದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ವೈಜ್ಞಾನಿಕ ಪುರಾವೆಗಳು ಸಿಗುವ ವರೆಗೆ, ನಾವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ನಾವು ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಜೊತೆಗೆ ಪ್ಲಾಸ್ಟಿಕ್ ಪಾತ್ರೆಗಳನ್ನು ಬಿಸಿ ಮಾಡಿ ಅದರಲ್ಲಿರುವ ಆಹಾರವನ್ನು ಸೇವನೆ ಮಾಡಬಾರದು. ಜೊತೆಗೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದನ್ನು ತಪ್ಪಿಸಿ ಎಂದು ತಜ್ಞರು ಹೇಳುತ್ತಾರೆ.

Recent Articles

spot_img

Related Stories

Share via
Copy link
Powered by Social Snap