ಕ್ಯಾಲಿಫೋರ್ನಿಯಾ:
ಕಳೆದ ಆಗಸ್ಟ್ 10ರಂದು ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಡೂಮ್ಸ್ಡೇ ಮೀನು ಎಂದು ಕರೆಯಲ್ಪಡುವ ಅತಿ ಅಪರೂಪದ ಓರ್ಫಿಶ್ ಕಳೇಬರ ಪತ್ತೆಯಾಯಿತು. ಈ ಮೀನು ಕಾಣಿಸಿಕೊಳ್ಳುವುದು ತುಂಬಾ ವಿರಳ. ಕಾಣಿಸಿಕೊಂಡರೆ ಮಾತ್ರ ಜಗತ್ತಿಗೆ ಏನೋ ಗಂಡಾಂತರ ಕಾದಿದೆ ಅನ್ನೋ ಮುನ್ಸೂಚನೆಯಂತೆ.
ಈ ಮೀನು ಕಾಣಿಕೊಂಡ ಬೆನ್ನಲ್ಲೇ ಆಘಾತಕಾರಿ ಘಟನೆ ವರದಿಯಾಗಿದೆ. ಅದೇನೆಂದರೆ, ಮೀನಿನ ಕಳೇಬರ ಕಾಣಿಸಿಕೊಂಡ ಲಾಸ್ ಏಂಜಲೀಸ್‌ನಲ್ಲಿ ಭೂಕಂಪನ ವರದಿಯಾಗಿದೆ. ಮೀನು ಕಾಣಿಕೊಂಡ ಎರಡು ದಿನಗಳ ನಂತರ ಭೂಕಂಪನ ಆಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಭೂಕಂಪನದ ತೀವ್ರತೆ ಕಡಿಮೆ ಇದ್ದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಅಂದಹಾಗೆ ಕ್ಯಾಲಿಫೋರ್ನಿಯಾದಲ್ಲಿ ಸುಮಾರು 125 ವರ್ಷಗಳಲ್ಲಿ ಕಂಡು ಬಂದ 20ನೇ ಡೂಮ್ಸ್ಡೇ ಮೀನು ಇದಾಗಿದೆ. ಈ ಸತ್ತ ಮೀನನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದರು. ಏಕೆಂದರೆ, ಯಾವುದಾದರೂ ದುರಂತದ ಸಮಯದಲ್ಲಿ ಸಾಮಾನ್ಯವಾಗಿ ಈ ಡೂಮ್ಸ್ಡೇ ಮೀನುಗಳು ಕಾಣಿಸಿಕೊಳ್ಳತ್ತವೆ ಎಂದು ಹೇಳಲಾಗುತ್ತದೆ.
ಜಪಾನಿಗರ ನಂಬಿಕೆಯ ಪ್ರಕಾರ, ಡೂಮ್ಸ್ಡೇ ಮೀನು ಕಾಣಿಸಿಕೊಳ್ಳುವುದು ಸಮೀಪಿಸುತ್ತಿರುವ ವಿಪತ್ತಿನ ಮುನ್ಸೂಚನೆಯಾಗಿದೆ. ಈ ಮೀನನ್ನು ‘ಸಮುದ್ರ ದೇವರ ಅರಮನೆಯ ಸಂದೇಶವಾಹಕ’ ಎಂದು ಕರೆಯಲಾಗುತ್ತದೆ. ದೇವರ ಮೀನು ಎಂದು ನಂಬಲಾಗಿದ್ದು, ಸುನಾಮಿ ಮತ್ತು ಭೂಕಂಪಗಳ ಬಗ್ಗೆ ಎಚ್ಚರಿಕೆ ನೀಡುವಾಗ ಈ ಮೀನುಗಳು ಕಾಣಿಸಿಕೊಳ್ಳುತ್ತದೆ ಎಂಬುದು ಜನರ ನಂಬಿಕೆಯಾಗಿದೆ. ಇದೀಗ ಕ್ಯಾಲಿಫೋರ್ನಿಯಾದಲ್ಲಿ ಭೂಕಂಪನ ಸಂಭವಿಸಿದ್ದು, ಡೂಮ್ಸ್ಡೇ ಮೀನು ಕಾಣಿಸಿಕೊಳ್ಳುವುದರ ಹಿಂದಿರುವ ಜನರ ಮಾತು ಇದೀಗ ನಿಜವಾಗಿದೆ.
ಈ ಅಸಾಮಾನ್ಯ ಜೀವಿ ಪತ್ತೆಯಾಗಿರುವುದನ್ನು ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಕ್ರಿಪ್ಸ್ ಇನ್‌ಸ್ಟಿಟ್ಯೂಷನ್ ಆಫ್ ಓಷಿಯಾನೋಗ್ರಫಿಯ ವಕ್ತಾರರಾದ ಲಾರೆನ್ ಫಿಂಬ್ರೆಸ್ ವುಡ್ ವರದಿ ಮಾಡಿದ್ದಾರೆ. ವಿಜ್ಞಾನಿಗಳು ಮತ್ತು ಜೀವರಕ್ಷಕರು ಓರ್ಫಿಶ್ ಅನ್ನು ಪರೀಕ್ಷೆಗಾಗಿ ನ್ಯಾಷನಲ್ ಒಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ ಗೆ ಕೊಂಡೊಯ್ದಿದ್ದಾರೆ.
ಡೂಮ್ಸ್ಡೇ ಎಂದು ಕರೆಯಲ್ಪಡುವ ಈ ಓರ್ಫಿಶ್ ಸಾಮಾನ್ಯವಾಗಿ ಸಮುದ್ರದ ಕೆಳಭಾಗದಲ್ಲಿ ವಾಸಿಸುತ್ತದೆ. ಮೇಲ್ಮೈಯಿಂದ ಸುಮಾರು 700 ರಿಂದ 3,280 ಅಡಿ ಕೆಳಗೆ ಜೀವಿಸುತ್ತವೆ. ಆದ್ದರಿಂದ, ಮೇಲ್ಮೈನಲ್ಲಿ ಈ ಜೀವಿ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಈ ಮೀನುಗಳ ಆರೋಗ್ಯ ಸ್ಥಿತಿ ಹದಗೆಟ್ಟಾಗ ಅಥವಾ ಏನಾದರೂ ಆದಾಗ ಮಾತ್ರ ಹೊರಗಡೆ ಬರುತ್ತವೆ ಹೊರತು, ಇದು ಸನ್ನಿಹಿತವಾಗುತ್ತಿರುವ ವಿಪತ್ತಿನ ಸಂಕೇತವಲ್ಲ ಎಂದು ಸಂಶೋಧಕರು ಹೇಳಿದ್ದಾರೆ