ಬೆಂಗಳೂರು:
ಕ್ರೀಡೆಯ ಬಗ್ಗೆ ಧ್ಯಾನ್ ಚಂದ್ ಅವರಿಗಿದ್ದ ಮನಸ್ಥಿತಿ ಮತ್ತು ಬದ್ಧತೆಯನ್ನು ಯುವ ಕ್ರೀಟಾಪಟುಗಳು ಅನುಕರಿಸಿದರೆ ಯಶಸ್ಸು ಕಾಣಲು ಸಾಧ್ಯ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ನಗರದ ಕಂಠೀರವ ಕ್ರೀಡಾಂಗಣದ ಒಲಂಪಿಕ್ ಭವನದಲ್ಲಿ ನಡೆದ ಪದ್ಮಭೂಷಣ, ಹಾಕಿಪಟು ಮೇಜರ್ ಧ್ಯಾನ್ ಚಂದ್ ಜನ್ಮದಿನ ಹಾಗೂ ರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನೇಕ ಯುವಕರಲ್ಲಿ ಕ್ರೀಡಾ ಬದ್ಧತೆ ಕಡಿಮೆಯಾಗುತ್ತಿದೆ ಎಂದರು.
ಭಾರತೀಯ ಕ್ರೀಡಾ ಪಟುಗಳಿಗೆ ಯಾವುದೇ ರೀತಿಯ ಕೊರತೆಯಾಗಿಲ್ಲ. ಆದರೆ, ನಿರೀಕ್ಷೆಯಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ವಿವಿಧ ಕ್ರೀಡಾಕೂಟಗಳಲ್ಲಿ ಚಾಂಪಿಯನ್ ಶಿಪ್, ಮೆಡಲ್ ತರುತ್ತಿಲ್ಲ. ಆಫ್ರಿಕಾ ದೇಶಗಳು ಸೇರಿದಂತೆ ಸಣ್ಣ ದೇಶಗಳಲ್ಲಿ ಯಾವ ಸವಲತ್ತು ಇಲ್ಲದಿದ್ದರೂ ಒಲಂಪಿಕ್‌ನಲ್ಲಿ ಮೆಡಲ್ ತರುತ್ತಿದ್ದಾರೆ. ನಮ್ಮ ಯುವಕರು ಬೇರೆಯವರಿಗಿಂತ ಕಡಿಮೆಯೇನಿಲ್ಲ. ಆದರೆ, ದೃಢ ಸಂಕಲ್ಪ ಮತ್ತು ಛಲದ ಕೊರತೆಯಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಇಂದಿನ ಕ್ರೀಡಾಪಟುಗಳಿಗೆ ಸಿಗುತ್ತಿರುವ ಸವಲತ್ತುಗಳನ್ನು ಈ ಹಿಂದೆ ಬೇರೆ ಯಾವ ಸರ್ಕಾರಗಳು ನೀಡಿಲ್ಲ. ರಾಜ್ಯದಲ್ಲಿ ಕಂಠೀವರ ಕ್ರೀಡಾಂಗಣದಲ್ಲಿ ಮಾತ್ರ ಒಂದೇ ಒಂದು ಸಿಂಡರ್ ಟ್ರ್ಯಾಕ್ ಇತ್ತು. ಈಗ ಸಿಂಥೆಟಿಕ್ ಟ್ರ್ಯಾಕ್ ಮಾಡಲಾಗಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ ಕ್ರೀಡಾಂಗಣಗಳಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ಎಲ್ಲ ರೀತಿಯ ಸಹಕಾರಗಳ ಪ್ರಯೋಜನ ಪಡೆದುಕೊಂಡು, ಸಾಧನೆ ಮಾಡಿಯೇ ತೀರುತ್ತೇವೆ ಎಂಬ ಸಂಕಲ್ಪ ಮಾಡಬೇಕು ಕಿವಿಮಾತು ಹೇಳಿದರು
ಯುವಕರಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವುದರಿಂದ ಡ್ರಗ್ಸ್, ಮದ್ಯ ವ್ಯಸನ ಸೇರಿದಂತೆ ಇನ್ನಿತರ ದುಶ್ಚಟಗಳಿಂದ ದೂರ ಉಳಿಯುತ್ತಾರೆ. ದೇಶದ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ ಎಂಬುದು ಮನಸ್ಥಿತಿಯಿಂದ ಸಣ್ಣ ರಾಷ್ಟ್ರಗಳು ಕೂಡಾ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಇದೇ ಕಾರಣದಿಂದ ಭಾರತವು ಸಹ ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಿದೆ. 2036 ಒಲಂಪಿಕ್ ಕ್ರೀಡಾಕೂಟವನ್ನು ಭಾರತಕ್ಕೆ ತರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಯುವಕರು ಕ್ರೀಡೆಗೆ ಬಂದರೆ ದುಶ್ಚಟಗಳು ನಿಂತು ಹೋಗುತ್ತವೆ ಎಂದು ಅಭಿಪ್ರಾಯಪಟ್ಟರು.
