ಕೊರಟಗೆರೆ ತಾಲ್ಲೂಕಿನಲ್ಲಿ 407 ಮತ ಚಲಾವಣೆ

ಕೊರಟಗೆರೆ:


ವಿಧಾನಪರಿಷತ್ ಚುನಾವಣೆಗೆ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಾಲ್ಲೂಕಿನ 24 ಗ್ರಾ.ಪಂ ಹಾಗೂ ಒಂದು ಪಟ್ಟಣ ಪಂಚಾಯತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡಿದೆ.

ತಾಲ್ಲೂಕಿನ 24 ಗ್ರಾಮ ಪಂಚಾಯತಿಗಳಲ್ಲಿ 388 ಗ್ರಾಮ ಪಂಚಾಯತ್ ಸದಸ್ಯರು, 15 ಪಟ್ಟಣ ಪಂಚಾಯತಿ ಸದಸ್ಯರು, 3 ಪ.ಪಂ. ನಾಮ ನಿರ್ದೇಶಿತ ಸದಸ್ಯರು ಸೇರಿದಂತೆ ಸ್ಥಳೀಯ ಶಾಸಕರು ಸೇರಿ ಒಟ್ಟು 407 ಮತಗಳು ಚಲಾವಣೆಯಾಗಿವೆ.

ಕೊರಟಗೆರೆ ಪಟ್ಟಣ ಪಂಚಾಯಿತಿಗೆ ಕೇಂದ್ರದಿಂದ ಅಬ್ಸರ್ವರ್ ಆಗಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ. ರವಿಕುಮಾರ್ ಸುರ್ಪುರ್ ರವರು, ತಹಸೀಲ್ದಾರ್ ನಾಜೀಮಾ ಜಮ್ ಜಮ್ ರೊಂದಿಗೆ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ನಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳಧರ, ಜಟ್ಟಿ ಅಗ್ರಹಾರ, ಕೊರಟಗೆರೆ ಪಟ್ಟಣ ಪಂಚಾಯತಿ, ತುಂಬಾಡಿಗೆ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆಯನ್ನು ಪರಿಶೀಲಿಸಿದರು.

ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಡಾ.ಜಿ ಪರಮೇಶ್ವರ್ ಕೊರಟಗೆರೆ ಪಟ್ಟಣ ಪಂಚಾಯತಿಯಲ್ಲಿ ಮತದಾನ ಮಾಡಿದರು. ಅವರೊಟ್ಟಿಗೆ ಕಾಂಗ್ರೆಸ್‍ನ ಐದು ಮಂದಿ ಸದಸ್ಯರುಗಳು ಮತದಾನ ಮಾಡಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ 24 ಗ್ರಾಮ ಪಂಚಾಯಿತಿಗಳಲ್ಲೂ ಗ್ರಾಪಂ ಸದಸ್ಯರುಗಳು ಪಕ್ಷಭೇದವಿಲ್ಲದೆ ಒಟ್ಟೊಟ್ಟಿಗೆ ಆಗಮಿಸಿ ಮತದಾನ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು. ಪಕ್ಷ ಯಾವುದೇ ಇರಲಿ ಬಹುತೇಕ ಗ್ರಾಮ ಪಂಚಾಯತಿ ಸದಸ್ಯರು ಚುನಾವಣೆ ಎದುರಿಸಿ ಬಾಂಧವ್ಯ ಬೆಸೆಯುವ ರೀತಿಯಲ್ಲಿ ಮತದಾನ ನಡೆಸಿದ್ದು ವಿಶೇಷವಾಗಿತ್ತು. ಇಲ್ಲಿನ ಎಲ್ಲಾ ಪಕ್ಷದ ಮುಖಂಡರಲ್ಲಿಯೂ ಗ್ರಾಮ ಪಂಚಾಯಿತಿ ಸದಸ್ಯರ ಒಗ್ಗಟ್ಟಿನ ಮಂತ್ರದಿಂದ ಯಾರು ಯಾರಿಗೆ ಮತ ಚಲಾಯಿಸಿದರು ಎಂಬುದೇ ಗೊಂದಲಮಯವಾಗಿ ಫಲಿತಾಂಶ ಕಾದು ನೋಡುವ ಮನಸ್ಥಿತಿಗೆ ಬಂದರು.

ಯಶಸ್ವಿಯಾದ ಮತದಾನ :

ಕೊರಟಗೆರೆ ವಿಧಾನಸಭಾ ಕ್ಷೇತ್ರದ 24 ಗ್ರಾಮ ಪಂಚಾಯತಿಗಳಲ್ಲಿ ಶಾಂತಿಯುತವಾಗಿ ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ಚುನಾವಣೆ ನಡೆದಿದ್ದು, ತಹಸೀಲ್ದಾರ್ ನಜೀಮಾ ಜಮ್ ಜಮ್ ಪ್ರತಿ ಮತಗಟ್ಟೆಗೆ ಎರಡೆರಡು ಬಾರಿ ಭೇಟಿ ಮಾಡಿ ಯಾವುದೇ ಗೊಂದಲವಿಲ್ಲದೆ ಚುನಾವಣೆ ನಡೆಯುವ ನಿಟ್ಟಿನಲ್ಲಿ ಶ್ರಮವಹಿಸಿ ಮತದಾನ ಯಶಸ್ವಿಗೊಳ್ಳಲು ಹೆಚ್ಚು ಶ್ರಮ ವಹಿಸಿದ್ದು ಕಂಡುಬಂದಿತು.

ಚುನಾವಣೆ ಬಹಿಷ್ಕರಿಸಿ, ನಂತರ ಮತದಾನ ಮಾಡಿದರು..! :

ತಾಲ್ಲೂಕಿನ ತೀತಾ ಗ್ರಾಮ ಪಂಚಾಯತಿಯ ಸದಸ್ಯರುಗಳಾದ ರಮೇಶ್, ಹರೀಶ್, ಸುಭಾಶ್, ಶ್ರೀನಿವಾಸ್, ನಳಿನಾ ಸತೀಶ್, ಉಮಾ ಸಿದ್ದರಾಜು, ಸುಮಂಗಳ ರಂಗನಾಥ್ ಸೇರಿದಂತೆ ಒಟ್ಟು 7 ಮಂದಿ ಗ್ರಾಪಂ ಸದಸ್ಯರು ಚುನಾವಣೆಯಿಂದ ದೂರ ಉಳಿದು ತಮ್ಮ ಅಸಮಾಧಾನವನ್ನು ಹೊರಹಾಕಿ ಕುಳಿತಿದ್ದರು. ಆದರೆ ಈ ಸಂದರ್ಭದಲ್ಲಿ ಖುದ್ದು ಶಾಸಕರಾದ ಡಾ.ಜಿ ಪರಮೇಶ್ವರ್ ಮನವೊಲಿಸಿ ಮತದಾನ ಮಾಡಿ ಬನ್ನಿ, ನಿಮ್ಮ ಸಮಸ್ಯೆ ಏನೆ ಇದ್ದರೂ ಕೂತು ಮಾತನಾಡಿ, ಸಮಸ್ಯೆ ಪರಿಹಾರ ಮಾಡುತ್ತೇನೆ ಎಂದು ಭರವಸೆ ನೀಡಿದ ಬಳಿಕ ಗ್ರಾಮ ಪಂಚಾಯತಿ ಸದಸ್ಯರುಗಳು ಮತದಾನಕ್ಕೆ ತೆರಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link