ಬೆಂಗಳೂರು:
2018ರಲ್ಲಿ ರಚನೆಯಾದ ಕಾಂಗ್ರೆಸ್ ಜೆಡಿಎಸ್-ಮೈತ್ರಿ ಸರ್ಕಾರ 2019ರಲ್ಲಿ ಪತನವಾಗಿದ್ದು ಈಗ ಇತಿಹಾಸ. 2018ರಲ್ಲಿ 104 ಸೀಟು ಗೆದ್ದಿದ್ದ ಬಿಜೆಪಿ ಜೆಡಿಎಸ್-ಕಾಂಗ್ರೆಸ್ ನ 16 ಶಾಸಕರನ್ನು ಆಪರೇಷನ್ ಕಮಲ ಮೂಲಕ ಸೆಳೆದು ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಸರ್ಕಾರ ರಚಿಸಿದರು.
2019ರಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಿದ್ದ 16 ಶಾಸಕರ ಪೈಕಿ ಈ ಬಾರಿಯ ಚುನಾವಣೆಯಲ್ಲಿ 8 ಮಂದಿ ಸೋಲು ಕಂಡಿದ್ದಾರೆ. ಅಂದು ಆಪರೇಷನ್ ಕಮಲಕ್ಕೆ ಬಲಿಯಾದವರು, ಕಾಂಗ್ರೆಸ್ ಜೆಡಿಎಸ್ ಬಿಟ್ಟು ಬಂದವರಿಗೆ, ಪಕ್ಷಾಂತರ ಮಾಡುವವರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಬಹುತೇಕ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
ಇದಕ್ಕೆ ಉತ್ತರ ಎಂಬಂತೆ ಮಾಜಿ ಆರೋಗ್ಯ ಸಚಿವ ಚಿಕ್ಕಬಳ್ಳಾಪುರದ ಡಾ ಸುಧಾಕರ್ ಟ್ವೀಟ್ ಮಾಡಿದ್ದಾರೆ. ನಾವು ಸುಮ್ಮನೆ ಕಾಂಗ್ರೆಸ್ ತೊರೆದು ಬಂದಿಲ್ಲ, ಅಂದು ಪಕ್ಷದಲ್ಲಿ ನಮ್ಮ ಅಸಹಾಯಕತೆ, ನಮ್ಮನ್ನು ನಂಬಿದ ಕಾರ್ಯಕರ್ತರನ್ನು, ಮುಖಂಡರನ್ನು ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು ಎಂದು ಬರೆದುಕೊಂಡಿದ್ದಾರೆ.
2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿನವೂ ಕುಮಾರಸ್ವಾಮಿ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು ಎಂದು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
