ಪಠ್ಯದಲ್ಲಿ ಬಸವಣ್ಣ ಅವರ ಇತಿಹಾಸ ತಿರುಚಲಾಗಿದೆ :ಡಾ.ಮಹಾಂತಲಿಂಗ ಶಿವಾಚಾರ್ಯ

ಬೆಂಗಳೂರು:

    ಕಳೆದ ಕೆಲವು ಸಮಯದಿಂದ ಚರ್ಚೆಯಲ್ಲಿರುವ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಇದೀಗ ಮತ್ತಷ್ಟು ತೀವ್ರಗೊಂಡಿದೆ. 9ನೇ ತರಗತಿ ಪರಿಷ್ಕೃತ ಸಮಾಜವಿಜ್ಞಾನ ಪಠ್ಯದಲ್ಲಿ ಬಸವಣ್ಣ ಅವರ ಇತಿಹಾಸ ತಿರುಚಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವೀರಶೈವ ಸಮುದಾಯದವರು ಪರಿಷ್ಕೃತ ಪಠ್ಯಪುಸ್ತಕ ಕುರಿತು ಆಕ್ರೋಶ ಹೊರಹಾಕುತ್ತಿದ್ದರೆ, ಲಿಂಗಾಯತ ಸಮುದಾಯದವರು ವಿಷಯಗಳು ಸರಿಯಾಗಿವೆ ಎಂದು ಹೇಳುತ್ತಿದ್ದಾರೆ.

   ಪರಿಷ್ಕೃತ ಪಠ್ಯಪುಸ್ತಕಕ್ಕೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥಾನದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

   ವೀರಶೈವ ಪದ ತೆಗೆದುಹಾಕಿರುವುದು ಸರಿಯಲ್ಲ, ಸಂಶೋಧಕ ಎಂ.ಎಂ. ಕಲಬುರಗಿ ಅವರು ಪ್ರಧಾನವಾಗಿ ಪ್ರಕಟಿಸಿರುವ ಸಮಗ್ರ ವಚನ ಸಂಪುಟದಲ್ಲಿನ ವಚನಗಳನ್ನು ಅವಲೋಕಿಸಿದರೆ ಬಸವಣ್ಣ ಸೇರಿದಂತೆ 30ಕ್ಕೂ ಹೆಚ್ಚು ಶಿವಶರಣರು ತಮ್ಮ 142 ವಚನಗಳಲ್ಲಿ 221 ಬಾರಿ ವೀರಶೈವ ಪದ ಬಳಕೆ ಮಾಡಿದ್ದಾರೆ. 10 ವಚನಗಳಲ್ಲಿ 21 ಕಡೆ ಮಾತ್ರ ಲಿಂಗಾಯತ ಪದ ಬಳಕೆ ಮಾಡಿದ್ದಾರೆ. ಆದರೆ, ಬಸವಣ್ಣ ಒಂದು ವಚನದಲ್ಲೂ ಲಿಂಗಾಯತ ಪದ ಬಳಕೆ ಮಾಡಿಲ್ಲ. ಒಂದು ವಚನದಲ್ಲಿ ತಾವು ನಿಜ ವೀರಶೈವ ಎಂದು ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ.

   ಅಲ್ಲದೇ ಬಸವಣ್ಣ ‘ಅರಿವನ್ನೇ ಗುರು’ ವಾಗಿಸಿಕೊಂಡಿದ್ದರು. ಇದು ಸಂಪೂರ್ಣ ತಪ್ಪು ಮಾಹಿತಿ. ಅವರು ಪ್ರತಿಯೊಬ್ಬರ ಅಂತರಂಗದಲ್ಲಿರುವ ಪರಮಾತ್ಮನ ಅರಿವೇ ಗುರುವಾಗಿರಬೇಕು. ಹೀಗಾಗಿ, ಇಂತಹ ಎಲ್ಲ ತಪ್ಪುಗಳನ್ನು ಸರಿಪಡಿಸಬೇಕು ಎಂದು ಕೋರಿದ್ದಾರೆ.

   ಲಿಂಗಾಯತ ವಿದ್ವಾಂಸ ಮತ್ತು ವಚನ ಸಾಹಿತ್ಯ ಸಂಶೋಧಕ ವೀರಣ್ಣ ರಾಜೂರು ಅವರು ಮಾತನಾಡಿ, ಬಸವಣ್ಣ ಅವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ ನಂತರ ಈ ಪಾಠವನ್ನು ಪರಿಚಯಿಸಲಾಗಿದೆ. ಬಸವಣ್ಣ ಅವರು ‘ವಿಶ್ವ ಮಾನವ’. ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಯಾವುದೇ ನಿರ್ದಿಷ್ಟ ಪಂಥ ಅಥವಾ ಧರ್ಮ ಸೀಮಿತವಾದವರಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯ, ಕಾರ್ಯಕರ್ತ ಕುಮಾರಣ್ಣ ಪಾಟೀಲ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

   ಲಿಂಗಾಯತ ಮತ್ತು ವೀರಶೈವ ಪದಗಳನ್ನು ಬಳಸದಿರುವುದು ಒಳ್ಳೆಯದು. ಪಠ್ಯವನ್ನು ಸೂಕ್ತ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಶರಣ, ಅಯ್ಯ ಮತ್ತು ಲಿಂಗ ಎಂಬ ಪದಗಳನ್ನು ಬಳಸಲಾಗಿದೆ, ಹಾಗೆಂದು ಲಿಂಗ ಧರ್ಮ ಅಥವಾ ಶರಣ ಧರ್ಮ ಅಥವಾ ಐಯ್ಯ ಧರ್ಮವನ್ನು ಅನುಸರಿಸುತ್ತೇವೆ ಎಂದು ಹೇಳಲು ಸಾಧ್ಯವೇ? ಖಂಡಿತವಾಗಿಯೂ ಇಲ್ಲ. ಬಸವಣ್ಣನವರು ಲಿಂಗವಂತ ಅಥವಾ ಲಿಂಗಭಕ್ತ ಎಂಬ ಪದವನ್ನು ಬಳಸಿದ್ದಾರೆ, ಆದರೆ ವಚನಗಳ ಹಿಂದಿರುವ ಶಕ್ತಿಯನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ರಾಜೂರು ತಿಳಿಸಿದ್ದಾರೆ.

   ಇದೇ ವೇಳೆ ಗದುಗಿನ ತೋಂಟದಾರ್ಯ ಸ್ವಾಮೀಜಿ ಮತ್ತು ಇತರೆ ಲಿಂಗಾಯತ ಮಠಾಧೀಶರು ಪಠ್ಯಪುಸ್ತಕದಲ್ಲಿನ ವಿಷಯಗಳು ಸರಿಯಾಗಿವೆ ಎಂದು ಹೇಳಿದ್ದು, ಪಠ್ಯಪುಸ್ತಕವನ್ನು ಸ್ವಾಗತಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap