ಹರಿಹರ:
ಚಿತ್ರರಂಗಕ್ಕಿಂತ ವೃತ್ತಿ ರಂಗಭೂಮಿಯ ಬದುಕಿಗೆ ಭದ್ರತೆ ಸಿಗುತ್ತದೆ ಎಂದು ಖ್ಯಾತ ಹಿರಿಯ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಹೇಳಿದರು.
ನಗರದ ಶ್ರೀ ಗ್ರಾಮದೇವತೆ ಯುವಕ ಸಂಘದ ವಿನಾಯಕ ಮಹೋತ್ಸವ ಪೆಂಡಾಲ್‍ಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದಿಂದ ದಾವಣಗೆರೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಹಮ್ಮಿಕೊಂಡಿರುವ ಕಾಮಿಡಿ ನೈಟ್ಸ್ ಪ್ರಚಾರಕ್ಕೆ ನಗರಕ್ಕೆ ಆಗಮಿಸಿದ್ದು ಮೂಲತ ರಂಗ ಕಲಾವಿದನಾದ ನಾನು 1976ರಲ್ಲಿ ಚಿತ್ರರಂಗವನ್ನು ಪರಸಂಗದ ಗೆಂಡೆತಿಮ್ಮ ಚಿತ್ರದ ಮೂಲಕ ಪ್ರವೇಶಿಸಿದೆ. ಹಿರಿಯ ಕಲಾವಿದರಾದ ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ, ಶಂಕರ್‍ನಾಗ್, ಆನಂತನಾಗ್ ಸೇರಿದಂತೆ ಅನೇಕ ಮಹಾನಿಯರೊಂದಿಗೆ ನಟಿಸಿದ್ದೇವೆ. ಈವೆರೆಗೆ ಐನೂರಕ್ಕೂ ಅಧಿಕ ಚಿತ್ರಗಳಲ್ಲಿ ಪಾತ್ರ ಮಾಡಿದ್ದೇನೆ ಎಂದರು.
ಚಿತ್ರರಂಗ ಅಂದಿಗೂ ಇಂದಿಗೂ ಸಾಕಷ್ಟು ಬದಲಾಗಿದೆ. ಆಗಿನ ಚಿತ್ರರಂಗದಲ್ಲಿ ಪಾತ್ರ ಮಾಡಿದ್ದರೂ ಹಣ ಸಿಗುವುದು ಕಷ್ಟವಿತ್ತು. ಈಗ ಹಣ ಸಿಗುತ್ತದೆ ಆದರೆ ಅವಕಾಶಗಳು ಸಿಗುವುದು ದುಸ್ತರವಾಗಿದೆ. ಈಗಿನ ಚಿತ್ರರಂಗ ಡಿಜಿಟಲೀಕರಣಗೊಂಡು ಹಿಂದಿನ ಸ್ವಾರಸ್ಯವಿಲ್ಲದಂತಾಗಿದೆ.
ಆದರೆ ಚಿತ್ರರಂಗದಲ್ಲಿ ಯಾರೂ ನೆಲೆ ಕಂಡುಕೊಳ್ಳಲಾಗುತ್ತಿಲ್ಲ. ಬರೀ ಹೊಸ ಮುಖಂಗಳು ಕಾಣುತ್ತೇವೆ. ಚಿತ್ರರಂಗದಲ್ಲಿ ನಟನೆ ಮಾಡುವುದು ಈಗ ಫ್ಯಾಶನ್ ಆಗಿದೆ. ಹಿಂದಿನವರಿಗೆ ಇದು ಬದುಕಿನ ಆಧಾರವಾಗಿತ್ತು. ಹಿರಿಯ ಕಲಾವಿದರಿಗೆ ಈಗ ಬೆಲೆ ಇಲ್ಲದಂತಾಗಿದೆ. ಅನೇಕ ಹಿರಿಯ ಕಲಾವಿದರು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಅವರ ಪ್ರತಿಭೆ ಚಿತ್ರರಂಗದವರಿಗೆ ಬೇಡವಾಗಿದೆ.
ಹೀಗಾಗಿ ನಾವು ಮತ್ತೆ ರಂಗಭೂಮಿ ಕಡೆಗೆ ಮುಖ ಮಾಡಿದ್ದೇವೆ. ದಕ್ಷಿಣ ಭಾಗಕ್ಕೆ ಹೋಲಿಸಿದರೆ, ಉತ್ತರ ಕರ್ನಾಟಕದಲ್ಲಿ ರಂಗಭೂಮಿಗೆ ನೆಲೆ ಇದೆ. ಅಲ್ಲಿರುವ ಜನತೆ ರಂಗಭೂಮಿಯನ್ನು ಅಸ್ವಾದಿಸುತ್ತಾರೆ. ಆ ಜನರೆ ನಮ್ಮಂತಹ ಕಲಾವಿದರಿಗೆ ಅನ್ನದಾತರಾಗಿದ್ದಾರೆಂದರು.
ಇನ್ನೋರ್ವ ಹಿರಿಯ ಕಲಾವಿದೆ ರಾಣಿ ಮಾತನಾಡಿ, ನಮ್ಮಪೋಷಕರು ಮೂಲತಹ ಹರಿಹರದ ವಾಸಿಗಳಾಗಿದ್ದರಿಂದ ನನಗೆ ಹರಿಹರದ ಮೇಲೆ ಅಪಾರ ಪ್ರೀತಿ ಇದೆ. ನಮ್ಮಜ್ಜಿ ತುಳಜಮ್ಮ ಇಲ್ಲಿಯವರೆ ಆಗಿದ್ದರು. ನಾನು ಚಿಕ್ಕವಳಿದ್ದಾಗ ಆಗಾಗ ಇಲಿಗೆ ಬರುತ್ತಿದ್ದೆ. ಬೆಂಗಳೂರಿನಲ್ಲಿ ನಾನು ಚಿತ್ರರಂಗ ಪ್ರವೇಶಿಸಿ 200 ಚಿತ್ರಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದೇನೆ. ಭಜರಂಗಿ, ವಜ್ರಕಾಯಕ, ಪ್ರೇಮಾಗ್ನಿ, ಆಪ್ತ ರಕ್ಷಕ ಹೀಗೆ ಹಿರಿ, ಕಿರಿಯ ನಟರೊಂದಿಗೆ ಚಿತ್ರಗಳಲ್ಲಿ ನಟಿಸಿದ್ದೇನೆ. ಅಮೃತ ವರ್ಷಿಣಿ ಧಾರವಾಹಿ ನನಗೆ ಹೆಚ್ಚಿನ ಹೆಸರು ಖ್ಯಾತಿಯನ್ನು ನೀಡಿತು ಎಂದರು.
ಈ ಸಂದರ್ಭದಲ್ಲಿ ಯುವಕ ಸಂಘದ ಪ್ರವೀಣ್ ಪಿ.ಪವಾರ್, ಶ್ರೀಪಾದ್ ಟಿ.ಕಾಟ್ವೆ, ವಿಕ್ರಮ್ ಪಿ.ಮೆಹರ್ವಾಡೆ, ಆನಂದ್ ಜಿ.ಸೋಳಂಕಿ, ಪ್ರಕಾಶ್ ಎನ್.ಖಿರೋಜಿ, ದೀಪಕ್ ಎಸ್.ಮೇಘರಾಜ್, ನವೀನ್ ಎಂ.ಮೆಹರ್ವಾಡೆ, ಪ್ರವೀಣ್ ಪಿ.ಬಾಂಡಗಿ, ಈಶ್ವರ್ ಮೆಹರ್ವಾಡೆ, ಕೃಷ್ಣ ರಾಜೊಳ್ಳಿ, ನಾಗೂಸಾ, ತಿಪ್ಪೇಶಿ ಸೋಳಂಕಿ, ಚನ್ನಪ್ಪ ಹತ್ಕೋಲ್, ಮೋತಿಲಾಲ್ ಖಿರೋಜಿ, ಅರ್ಚಕ ಮಾನಪ್ಪ ಆಚಾರ್, ಮೈಲಾರ್‍ಲಿಂಗಸಾ ಕಾಟ್ವೆ, ಓಂಕಾರ್, ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ