ಮಿಡಿಗೇಶಿ :
ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿ ಬೇಡತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆತಿಮ್ಮನಹಳ್ಳಿ ಗ್ರಾಮದಲ್ಲಿ ಫ್ಲೋರೈಡ್ ಮಿಶ್ರಿತ ನೀರು ಸರಬರಾಜು ಆಗುತ್ತಿದೆ. ಇದರಿಂದಾಗಿ ಜನ ಸಾಮಾನ್ಯರಿಗೆ, ಸಣ್ಣ ಪುಟ್ಟ ಮಕ್ಕಳಿಗೆ ರೊಗ ರುಜಿನಗಳು ಉಲ್ಬಣಗೊಳ್ಳುವಂತಾಗಿದೆ. ಗ್ರಾಮದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ಎರಡು ವರ್ಷಗಳೇ ಆಗಿದ್ದರೂ, ಸಂಬಂಧಪಟ್ಟ ಮಹಾಶಯರ ಗಮನಕ್ಕೆ ಸಮಸ್ಯೆಯನ್ನು ಹಲವು ಬಾರಿ ಗ್ರಾಮಸ್ಥರು ತಂದಿದ್ದರೂ ಇಲ್ಲಿಯತನಕ ಅದನ್ನು ದುರಸ್ತಿ ಮಾಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಇದರಿಂದಾಗಿ ಈಗಾಗಲೆ ಇಲ್ಲಿನ ಕೆಲ ಗ್ರಾಮಸ್ಥರಿಗೆ ಅನಾರೋಗ್ಯ ಸಮಸ್ಯೆ ಕಾಡಿದೆ.
ಗ್ರಾಮದ ಜನತೆಗೆ ಕುಡಿಯಲು ಯೋಗ್ಯವಾದ ನೀರನ್ನು ಒದಗಿಸಲೆಂದೆ ನೇಮಕಗೊಂಡಿರುವ ಕುಡಿಯುವ ನೀರಿನ ನಿರ್ವಹಣಾದಿಕಾರಿಗಳವರ ಕರ್ತವ್ಯಾದರೂ ಏನು? ಸದರಿ ಇಲಾಖೆಯವರು ಪ್ರತಿ ತಿಂಗಳು ವೇತನವನ್ನು ಪಡೆಯುತ್ತಿಲ್ಲವೇ? ಇವರುಗಳು ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಯಿತಿ ಸಾಮಾನ್ಯ ಸಭೆಗಳಿಗೆ ಬರೀ ಸುಳ್ಳಿನ ಕಂತೆಯ ವರದಿಯನ್ನೇ ನೀಡುತ್ತಿರುತ್ತಾರೆಯೆ? ಸಂಬಂಧಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಮನಿಸಿ ರಾಜ್ಯದ ಗಡಿ ಭಾಗದ ಎಮ್ಮೇತಿಮ್ಮನಹಳ್ಳಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾಗುವರೇ? ಎಂಟು ದಿನಗಳೊಳಗಡೆ ಸರಿಪಡಿಸದೆ ಇದ್ದ ಪಕ್ಷದಲ್ಲಿ ರಾಜ್ಯ ಹೆದ್ದಾರಿ ಕೆಶಿಪ್ ರಸ್ತೆ ಬೇಡತ್ತೂರು ಕ್ರಾಸ್ ಬಳಿ ತಡೆ ನಡೆಸುವುದಾಗಿ ಈ ಭಾಗದ ಪ್ರಜ್ಞಾವಂತ ನಾಗರಿಕರು ಮತ್ತು ಜನ ಸಾಮಾನ್ಯರು ಈ ಮೂಲಕ ಎಚ್ಚರಿಕೆ ನೀಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ