ಗಾಂಧಿನಗರ:
ಗುಜರಾತ್‌ನ ವಡೋದರಾದ ಕರೇಲಿಬಾಗ್ ಪ್ರದೇಶದಲ್ಲಿ ಗುರುವಾರ ತಡರಾತ್ರಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದಾನೆ. ಪರಿಣಾಮ ಕಾರು ಹಲವಾರು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದರೆ, ಹಲವರು ಗಾಯಗೊಂಡಿದ್ದಾರೆ. ಅಪಘಾತ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ವಡೋದರಾ ನಗರದ ಜನನಿಬಿಡ ಕರೇಲಿಬಾಗ್‌ನಲ್ಲಿರುವ ಅಮ್ರಪಾಲಿ ಚಾರ್ ರಾಸ್ತಾ ಬಳಿ ಈ ಅಪಘಾತ ಸಂಭವಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಅತೀ ವೇಗದಲ್ಲಿದ್ದ ಕಪ್ಪು ಬಣ್ಣದ ಕಾರೊಂದು ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ಪಕ್ಕದಲ್ಲಿ ನಿಂತಿದ್ದ ಹಲವಾರು ಜನರನ್ನು ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದು, ನಂತರ ಅವರನ್ನು ಹೇಮಾಲಿಬೆನ್ ಪಟೇಲ್ ಎಂದು ಗುರುತಿಸಲಾಗಿದೆ. ಅಪಘಾತದ ಪರಿಣಾಮ ಜೈನಿ (12), ನಿಶಾಬೆನ್ (35), 10 ವರ್ಷದ ಬಾಲಕಿ ಮತ್ತು 40 ವರ್ಷದ ಅಪರಿಚಿತ ವ್ಯಕ್ತಿ ಸೇರಿದಂತೆ ಮೂರರಿಂದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಸ್ಥಳದಲ್ಲಿ ಪೊಲೀಸರು ಮತ್ತು ಸುತ್ತಮುತ್ತಲಿನ ಜನರು ಜಮಾಯಿಸುತ್ತಿದ್ದಂತೆ, ತೀವ್ರವಾಗಿ ಹಾನಿಗೊಳಗಾದ ಕಾರಿನಿಂದ ಚಾಲಕ ಕುಡಿದ ಮತ್ತಿನಲ್ಲಿ ಹೊರಬಂದಿದ್ದಾನೆ.
ವೈರಲ್ ಆಗಿರುವ ವೀಡಿಯೊ ದೃಶ್ಯಗಳ ಪ್ರಕಾರ, ಕಪ್ಪು ಟಿ-ಶರ್ಟ್ ಧರಿಸಿದ್ದ ಚಾಲಕ ಸಂಪೂರ್ಣವಾಗಿ ನಶೆಯಲ್ಲಿದ್ದ. ಆತ ಸುತ್ತಲಿದ್ದವರ ಮೇಲೆ ಕೂಗಾಡಲು ಪ್ರಾರಂಭಿಸಿದ್ದಾನೆ. “ಮತ್ತೊಂದು ಸುತ್ತು, ಇನ್ನೊಂದು ಸುತ್ತು!” ಮತ್ತು “ಓಂ ನಮಃ ಶಿವಾಯ ಎಂದು ಆತ ಹೇಳಿದ್ದಾನೆ ಎನ್ನಲಾಗಿದೆ. ಅಪಘಾತದ ಬಗ್ಗೆ ಸ್ಥಳೀಯ ಅಧಿಕಾರಿಗಳು ತ್ವರಿತ ಕ್ರಮ ಕೈಗೊಂಡಿದ್ದಾರೆ. ಜಂಟಿ ಪೊಲೀಸ್ ಆಯುಕ್ತೆ ಲೀನಾ ಪಾಟೀಲ್, ಚಾಲಕ ಕುಡಿದ ಅಮಲಿನಲ್ಲಿದ್ದನೆಂದು ದೃಢಪಡಿಸಿದ್ದಾರೆ ಮತ್ತು ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ನಾಲ್ಕು ಚಕ್ರದ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. ಆರೋಪಿ ಚಾಲಕನನ್ನು ಬಂಧಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
