ದುಪ್ಪಟ್ಟು ಹಣ ನೀಡುವುದಾಗಿ ಗ್ರಾಮಸ್ಥರಿಗೆ ವಂಚನೆ ….!

ವಿಜಯನಗರ

   1 ಲಕ್ಷಕ್ಕೆ 10 ಲಕ್ಷ‌ ಹಣ ಮಾಡಿ ಕೊಡ್ತೀವಿ ಎಂದು ಜನರನ್ನು ನಂಬಿಸಿ ಇಡೀ ಗ್ರಾಮದ‌ 60ಕ್ಕೂ ಹೆಚ್ಚು ಜನರಿಗೆ ಖದೀಮರು ಮೋಸ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ತಾಂಡಾದಲ್ಲಿ ನಡೆದಿದೆ. ಒಂದಲ್ಲ, ಎರಡಲ್ಲ, ಹತ್ತು ಪಟ್ಟು ದುಡ್ಡು ಡಬ್ಲಿಂಗ್ ಮಾಡಿ ಕೊಡ್ತೀವಿ ಎಂದು ಖದೀಮರು ಪಂಗನಾಮ ಹಾಕಿದ್ದಾರೆ. ಆರು ತಿಂಗಳಲ್ಲಿ ಗ್ರಾಮವೊಂದರಲ್ಲಿ 60ಕ್ಕೂ ಹೆಚ್ಚು ಜನರಿಂದ 2 ಕೋಟಿಗೂ ಅಧಿಕ ಹಣ ಲೂಟಿ ಮಾಡಿದ್ದಾರೆ.

   ನಿಮಗೆ ಕಷ್ಟ ಇದೆಯಾ? ಆರು ತಿಂಗಳಲ್ಲಿ ನಿಮ್ಮ ಕಷ್ಟ ಪರಿಹಾರ ಮಾಡ್ತೀವಿ ಎಂದು ಆಸೆ ತೋರಿಸಿ ವಂಚನೆ ಮಾಡಿದ್ದಾರೆ. ಮತ್ತೊಂದೆಡೆ ಈ ಖದೀಮರು ಮನೆಗೆ ಬಂದು ರಾತ್ರಿ ವೇಳೆ ಪೂಜೆ ಮಾಡಿ ಹಣ ಇಡ್ತಿದ್ರು. ಜನರಿಂದ ಹಣ ಸಂಗ್ರಹಿಸಿ ಎಲ್ಲರ ಸಮ್ಮುಖದಲ್ಲೇ ಎಲ್ಲರ ಮೊಬೈಲ್‌ ಫೋನ್ ಫ್ಲೈಟ್ ಮೂಡಿಗೆ ಹಾಕಿಸಿ, ಲೈಟ್ ಆಫ್ ಮಾಡಿ ಪೂಜೆ ಮಾಡಿ ನಂತರ ಬಾಕ್ಸ್ ವೊಂದರಲ್ಲಿ ಲಕ್ಷಾಂತರ ಹಣ ಇಟ್ಟು ಪ್ಯಾಕ್ ಮಾಡಬಹುದಾ ಎಂದು ಜನರನ್ನು ಕೇಳಿ ಬಳಿಕ ನೀವು ಹೊರಗೆ ಹೋಗಿ ನಾವು ಪೂಜೆ ಮಾಡಿ ಮತ್ತೆ ಪ್ಯಾಕ್ ಮಾಡಬೇಕು ಎಂದು ಜನರನ್ನು ಹೊರಗೆ ಕಳಿಸುತ್ತಿದ್ರು.

   ಆಮೇಲೆ ಇದನ್ನ 168 ದಿನಗಳವರೆಗೆ ತೆಗೆಯಬಾರದು ಆಮೇಲೆ ಇದರಲ್ಲಿನ ಹಣ 10 ಪಟ್ಟು ಹೆಚ್ಚಾಗುತ್ತೆ ಎಂದು ಹೇಳಿ ಮೋಸ ಮಾಡಿದ್ದಾರೆ. ಬಾಕ್ಸ್ ಓಪನ್ ಮಾಡಿದರೆ ಹಣ 10 ಪಟ್ಟು ಹೆಚ್ಚಾಗಿರುತ್ತೆ ಎಂದು ನಂಬಿದ ಜನ 168 ದಿನಗಳ ಬಳಿಕ ಬಾಕ್ಸ್ ಓಪನ್ ಮಾಡಿ ನೋಡಿದಾಗ ಹಣ ಮಾಯವಾಗಿದೆ. ಬಾಕ್ಸ್​ನಲ್ಲಿ ಊದಿನ ಕಟ್ಟಿಯ ಬಾಕ್ಸ್​ಗಳು ಪತ್ತೆಯಾಗಿವೆ. 

   ಆ ಮನೆಯವರ ಮಾತು ಕೇಳಿ ಇದೀಗ ತಾಂಡಾದ‌ ನೂರಾರು ಜನರು ಮೋಸಕ್ಕೆ ಒಳಗಾಗಿದ್ದಾರೆ. ಮೋಸ ಹೋದವರಲ್ಲಿ ಒಬ್ಬರಾದ ಕಲ್ಲಹಳ್ಳಿ ತಾಂಡಾದ ಕುಮಾರ ನಾಯ್ಕ್ ಅವರು ಹೊಸಪೇಟೆ ಗ್ರಾಮೀಣ‌ ಠಾಣೆಗೆ‌ ದೂರು ನೀಡಿದ್ದಾರೆ.

   ದೂರಿನ ಮೇರೆಗೆ ಮೂವರನ್ನ ಅರೆಸ್ಟ್ ಮಾಡಲಾಗಿದೆ. ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್, ಆತನಿಗೆ ಸಹಕರಿಸುತ್ತಿದ್ದ ಕಲ್ಲಹಳ್ಳಿ ಗ್ರಾಮದ ತುಕ್ಯಾ ನಾಯ್ಕ್, ಶಂಕು ನಾಯ್ಕ್ ನನ್ನು ಬಂಧಿಸಿ ಬಂಧಿತರಿಂದ‌ ಬರೋಬ್ಬರಿ 35 ಲಕ್ಷ ನಗದು ಹಣ, ನೋಟು ಎಣಿಸುವ 1 ಯಂತ್ರ, ಟಾವೆಲ್, ಜಮ್ಕಾನ ಜಪ್ತಿ ಮಾಡಲಾಗಿದೆ. ಜಿತೇಂದ್ರನ ಚಿತ್ರದುರ್ಗದ ಮನೆಯಲ್ಲಿಯೂ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಪ್ರಮುಖ ಆರೋಪಿಗಳಾದ ಕಲ್ಲಹಳ್ಳಿ ಗ್ರಾಮದ ಸ್ವಾಮಿ ನಾಯ್ಕ್, ಕಾರುಬಾರಿ ವೆಂಕ್ಯಾ ನಾಯ್ಕ್ ಎಸ್ಕೇಪ್ ಆಗಿದ್ದಾರೆ.

Recent Articles

spot_img

Related Stories

Share via
Copy link
Powered by Social Snap