ಚಿತ್ರದುರ್ಗ:
ನಾಡಿನ ಸಮಸ್ತ ಪ್ರಜೆಗಳ ರಕ್ಷಣೆ ಮಾಡುವ ಹೊಣೆಗಾರಿಕೆ ಹೊತ್ತಿರುವ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ.ಯವರ ಮೇಲೆ ಧಾಳಿ ನಡೆಸಿ ಎಂದು ಪ್ರಚೋದನಕಾರಿ ಭಾಷಣ ಮಾಡಿರುವುದನ್ನು ವಿರೋಧಿಸಿ ಭಾರತೀಯ ಜನತಾಪಾರ್ಟಿಯಿಂದ ಶುಕ್ರವಾರ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕೃತಿ ದಹನಗೊಳಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಸನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಬಿಜೆಪಿ.ಯವರು ನನಗೆ ತೊಂದರೆ ಕೊಡುತ್ತಿದ್ದಾರೆ. ಅದಕ್ಕಾಗಿ ದಂಗೆ ಏಳಿ ಎಂದು ಸಾರ್ವಜನಿಕರನ್ನು ರೊಚ್ಚಿಗೆಬ್ಬಿಸಿರುವುದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್.ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಬಿಜೆಪಿ.ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಮನೆ ಮೇಲೆ ದಾಳಿ ನಡೆಸಿ ಹಲ್ಲೆಗೆ ಯತ್ನಿಸಿರುವುದು ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಲ್ಲಿ ಇದು ಪ್ರಥಮ. ಆದ್ದರಿಂದ ಅಂತಹ ಕಿಡಿಗೇಡಿಗಳನ್ನು ಕೂಡಲೆ ಬಂಧಿಸಿ ಜೈಲಿಗೆ ಕಳಿಸಿ ಯಡಿಯೂರಪ್ಪನವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಕೇವಲ 37 ಸೀಟುಗಳನ್ನು ಗೆದ್ದಿದ್ದರೂ ಸಂವಿಧಾನಾತ್ಮಕವಾಗಿ ಜವಾಬ್ದಾರಿ ಹುದ್ದೆಯಲ್ಲಿರುವ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಜವಾಬ್ದಾರಿ ಮರೆತು ಬಿಜೆಪಿ.ಯವರ ಮೇಲೆ ದಂಗೆ ಏಳಿ ಎಂದು ಸಾರ್ವಜನಿಕರನ್ನು ಪ್ರಚೋದಿಸಿರುವುದು ನಿಜಕ್ಕೂ ಹಾಸ್ಯಾಸ್ಪದ. ಪ್ರಚೋದನಕಾರಿ ಭಾಷಣ ಮಾಡುವವರನ್ನು ಗೂಂಡಾ ಕಾಯಿದೆಯಡಿ ಬಂಧಿಸಬೇಕೆಂಬ ಕಾನೂನು ಜಾರಿಯಲ್ಲಿದೆ.
ಅದಕ್ಕಾಗಿ ತಕ್ಷಣವೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಅದಕ್ಕೂ ಮೊದಲು ನೈತಿಕ ಹೊಣೆ ಹೊತ್ತು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಿರೋಧ ಪಕ್ಷದ ನಾಯಕರಾಗಿರುವ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಿಂತಲೂ ಉನ್ನತ ಸ್ಥಾನದಲ್ಲಿದ್ದಾರೆ. ಹಾಗಾಗಿ ದಾಳಿ ನಡೆಸಿದವರ ವಿರುದ್ದ ಎಫ್.ಐ.ಆರ್.ಹಾಕಿ ಜೈಲಿಗೆ ಕಳಿಸಿ ಎಂದು ಆಗ್ರಹಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮಾತನಾಡಿ ಹೆಚ್.ಡಿ.ಕುಮಾರಸ್ವಾಮಿ ಹಾಸನದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಭಾಷಣ ಮಾಡುವಾಗ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತು ಬಿಜೆಪಿ.ಯವರ ಮೇಲೆ ದಾಳಿ ನಡೆಸಿ ಎಂದು ಬಹಿರಂಗವಾಗಿ ಪ್ರಚೋದನಕಾರಿ ಹೇಳಿಕೆ ನೀಡಿರುವುದು ನಾಗರೀಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್. ಗೂಂಡ ಸಕಾರ್ಯಕರ್ತರು ಬಿಜೆಪಿ.ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನಿವಾಸಕ್ಕೆ ನುಗ್ಗಿ ಹಲ್ಲೆಗೆ ಯತ್ನಿಸಿರುವುದು ಅತ್ಯಂತ ಹೇಯ ಕೃತ್ಯ ಎಂದು ಖಂಡಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಷರತ್ತಾಗಿ ಬಿ.ಎಸ್.ಯಡಿಯೂರಪ್ಪನವರಲ್ಲಿ ಕ್ಷಮೆ ಯಾಚಿಸಿ ಅಧಿಕಾರದಿಂದ ಕೆಳಗಿಳಿಯಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಕಿತ್ತೊಗೆಯಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು ರಾಜ್ಯದಲ್ಲಿರುವ ಸರ್ಕಾವರನ್ನು ವಿಸರ್ಜಿಸಿ ರಾಷ್ಟ್ರಪತಿರವರ ಆಳ್ವಿಕೆಯನ್ನು ಜಾರಿಗೆ ತರುವಂತೆ ಒತ್ತಾಯಿಸಲಾಗುವುದು ಎಂದರು.
ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್, ಮಾಜಿ ಜಿಲ್ಲಾಧ್ಯಕ್ಷರುಗಳಾದ ಟಿ.ಜಿ.ನರೇಂದ್ರನಾಥ್, ವಕ್ತಾರರಾದ ದಗ್ಗೆಶಿವಪ್ರಕಾಶ್, ನಾಗರಾಜ್‍ಬೇದ್ರೆ, ಖಜಾಂಚಿ ನರೇಂದ್ರ, ನಗರಾಧ್ಯಕ್ಷ ತಿಪ್ಪೇಸ್ವಾಮಿ, ವೆಂಕಟೇಶ್‍ಯಾದವ್, ನವೀನ್ ಚಾಲುಕ್ಯ, ಕಲ್ಲೇಶಯ್ಯ, ಸತ್ಯನಾರಾಯಣ, ಶಂಭು, ರೇಖ, ರಾಜುಶಿವನಕೆರೆ, ಶಿವಣ್ಣಾಚಾರ್, ನಗರಸಭೆ ಸದಸ್ಯರುಗಳಾದ ಹೆಚ್.ಶ್ರೀನಿವಾಸ್, ಹರೀಶ್, ಭಾಸ್ಕರ್, ಅನುರಾಧ, ವೆಂಕಟೇಶಪ್ಪ, ವಿಜಯಲಕ್ಷಿ, ಅಭಿಲಾಷ್, ಜಯಲಕ್ಷ್ಮಿ, ಜಯದೇವ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ