ಬೆಂಗಳೂರು:
ಸ್ಪಷ್ಟ ದಿನಾಂಕ ನಿಗದಿಪಡಿಸಿ ಕಾಂತರಾಜ್ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಮಂಡಿಸುವಂತೆ ಒತ್ತಾಯಿಸುತ್ತೇವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್, ಮಾಜಿ ಐಎಎಸ್ ಅಧಿಕಾರಿ ಶ್ರೀನಿವಾಸ ಆಚಾರಿ ಹಾಗೂ ಮಾಜಿ ಸದಸ್ಯ ಕಾಂತರಾಜ್ ಆಯೋಗ ಕೆಎನ್ ಲಿಂಗಪ್ಪ ಹೇಳಿದ್ದಾರೆ.
ಕಾಂತರಾಜು ಆಯೋಗದ ವರದಿ ಸಿದ್ದಪಡಿಸಲು ಅಂದಿನ ಸರ್ಕಾರ ಸುಮಾರು 170 ಕೋಟಿ ರೂ. ಖರ್ಚು ಮಾಡಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿ ಮಾಡಿ, ಕಾಂತರಾಜ್ ಆಯೋಗದ ವರದಿಯನ್ನು ಮಂಡಿಸಲು ದಿನಾಂಕ ನಿಗದಿಗೊಳಿಸುವಂತೆ ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.
ಅಂದಿನ ಕಾರ್ಯದರ್ಶಿಗಳು ವರದಿಗೆ ಸಹಿ ಮಾಡದ ಕಾರಣ ವರದಿಯ ವಿವರಗಳನ್ನು ಬಹಿರಂಗಪಡಿಸಲು ಗಂಭೀರ ಕಾನೂನು ಅಡಚಣೆಯಿದೆ, ಆದ್ದರಿಂದ ನಾವು ಅದನ್ನು ಸಾರ್ವಜನಿಕವಾಗಿ ಮಂಡಿಸಲು ಸಾಧ್ಯವಿಲ್ಲ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಈಗಾಗಲೇ ಕಾಂತರಾಜ್ ಆಯೋಗದ ವರದಿ ಸಲ್ಲಿಕೆಯಾಗಿದೆ. ಆದರೆ ಕಡತ ಹಿಂದುಳಿದ ವರ್ಗಗಳ ಆಯೋಗದ ಕಚೇರಿಯಿಂದ ನಾಪತ್ತೆಯಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಆದರೆ ಬ್ಯಾಕಪ್ ಆಗಿ ಸಾಫ್ಟ್ ಮತ್ತು ಹಾರ್ಡ್ ಕಾಪಿಗಳಿವೆ. ಆದರೆ ಸದಸ್ಯರು ಸಹಿ ಮಾಡಿದ ಮೂಲ ದಾಖಲೆ ಕಾಣೆಯಾಗಿದೆ. ಇದು ಬಹಳ ಅಮೂಲ್ಯವಾದ ದಾಖಲೆಯಾಗಿದೆ ಮತ್ತು ಟ್ಯಾಂಪರಿಂಗ್ ಅಥವಾ ಸರ್ಕಾರದ ಅನುಕೂಲಕ್ಕೆ ಅನುಗುಣವಾಗಿ ಪುನಃ ಬರೆಯುವುದರ ಸಾಧ್ಯತೆಯಿದೆಯಿದೆ, ಹೀಗಾಗಿ ಸಹಿ ಮಾಡಿರುವ ಕಡತವನ್ನು ಸಮರ್ಪಕವಾಗಿ ಸಂರಕ್ಷಿಸಬೇಕಾಗಿದೆ ಎಂದು ತಿಳಿದು ಬಂದಿದೆ.
ಕಾಣೆಯಾದ ದಾಖಲೆಯ ಬಗ್ಗೆ ಉತ್ತರಿಸಿದ ಜಯಪ್ರಕಾಶ್ ಹೆಗ್ಡೆ, ನಮ್ಮ ಬಳಿ ಹಾರ್ಡ್ ಕಾಪಿ ದಾಖಲೆಯಿದೆ. ಆದರೆ ಸದಸ್ಯ ಕಾರ್ಯದರ್ಶಿ ಸಹಿ ಮಾಡಿಲ್ಲ ಎಂದಿದ್ದಾರೆ. ಹಿಂದುಳಿದ ಸಮುದಾಯಗಳಿಗೆ ಕಡಿಮೆ ಪ್ರಾತಿನಿಧ್ಯವಿರುವ ಬಗ್ಗೆ ದ್ವಾರಕಾನಾಥ್ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಹಿಂದುಳಿದ ಸಮುದಾಯಗಳಾದ ಕುರುಬ, ಬೆಸ್ತ/ಮೊಗವೀರ, ಗೊಲ್ಲ, ಈಡಿಗಿಲ್ಲವ, ದೇವಾಂಗ, ಕುಂಬಾರ, ಮಡಿವಾಳ ಮತ್ತಿತರ ಸಮುದಾಯಗಳು ಒಟ್ಟಾಗಿ ಶೇ 50ರಷ್ಟು ಜನಸಂಖ್ಯೆ ಹೊಂದಿದ್ದರೂ ತಮ್ಮ ಹಕ್ಕು ಪಡೆದಿಲ್ಲ ಎಂದು ವಿವರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಿಂದುಳಿದ ಸಮುದಾಯದ ಮೂವರು ಸಚಿವರು ಮಾತ್ರ ಸಚಿವ ಸಂಪುಟದಲ್ಲಿದ್ದು, ಪ್ರಾತಿನಿಧ್ಯ ಕಡಿಮೆಯಾಗಿದೆ. ಸಮುದಾಯದ ಸಂಖ್ಯೆಗಳ ಪ್ರಕಾರ ಹೋದರೆ, 10-12 ಮಂತ್ರಿಗಳನ್ನು ಹೊಂದಿರಬೇಕು . ಆದರೆ ರಾಜಕೀಯ ವ್ಯವಸ್ಥೆಯಲ್ಲಿ ಅನೇಕ ಸಮುದಾಯಗಳಿಗೆ ಶೂನ್ಯ ಪ್ರಾತಿನಿಧ್ಯವಿದೆ ಎಂದು ವಿವರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ